ಪತ್ನಿ, ಮಕ್ಕಳ ಜೊತೆ ಸಿಎಂ ಯಡಿಯೂರಪ್ಪ ನಿವಾಸಕ್ಕೆ 4 ಕಿ.ಮೀ. ನಡೆದ ಕೊರೋನ ಸೋಂಕಿತ

Update: 2020-07-17 16:43 GMT

ಬೆಂಗಳೂರು: ಗಂಟೆಗಳ ಕಾಲ ಕಾದರೂ ಆ್ಯಂಬುಲೆನ್ಸ್ ಸಿಗದ ಕಾರಣ ಕೊರೋನ ಸೋಂಕಿತ ಬಸ್ ಚಾಲಕರೊಬ್ಬರು ಪತ್ನಿ, ಮಕ್ಕಳ ಜೊತೆ 4 ಕಿ.ಮೀ. ದೂರದಲ್ಲಿರುವ ಸಿಎಂ ಯಡಿಯೂರಪ್ಪನವರ ಮನೆಗೆ ನಡೆದುಕೊಂಡು ಹೋದ ಘಟನೆ ವರದಿಯಾಗಿದೆ.

ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಎಂಬವರ ವರದಿ ಪಾಸಿಟಿವ್ ಎಂದು ಬಂದಿತ್ತು. ಜ್ವರ ಕಾಣಿಸಿಕೊಂಡ ಕಾರಣ ಅವರು ಸೋಮವಾರ ಪರೀಕ್ಷೆ ಮಾಡಿಸಿದ್ದರು.

“ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್ ಸಿಗದ ಕಾರಣ ನಾನು ಪತ್ನಿ ಮತ್ತು ಮಕ್ಕಳ ಜೊತೆ ಆಟೋದಲ್ಲಿ ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ಸಹಾಯ ಯಾಚಿಸಿದೆ. ನನ್ನ 5 ವರ್ಷದ ಪುತ್ರನಿಗೂ ಜ್ವರವಿತ್ತು. ಆದರೆ ಅವರು ಇಲ್ಲಿಂದ ತೆರಳಿ ಆಸ್ಪತ್ರೆಗೆ ದಾಖಲಾಗಿ ಎಂದರು. ನಂತರ ಪೊಲೀಸ್ ಠಾಣೆಯಿಂದ ಮತ್ತೊಂದು ಆಟೋ ಹಿಡಿದು ಸಿಎಂ ನಿವಾಸಕ್ಕೆ ಹೊರಟೆ. ಕೆಲ ದೂರ ಹೋದ ಮೇಲೆ ರಿಕ್ಷಾ ಚಾಲಕ ಕೆಳಗಿಳಿಯುವಂತೆ ಹೇಳಿದ. ಇನ್ನೂ 4 ಕಿ.ಮೀ. ದೂರವಿತ್ತು. ಬೇರೆ ದಾರಿಯಿಲ್ಲದೆ ನಾವು ನಡೆದುಕೊಂಡೇ ಸಿಎಂ ನಿವಾಸದ ಮುಂದೆ ಹೋದೆವು” ಎಂದು ಸೋಂಕಿತ ವ್ಯಕ್ತಿ ಸ್ಥಳೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಕೂಡಲೇ ಮುಖ್ಯಮಂತ್ರಿ ಕಚೇರಿಗೆ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದು, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News