ಕೊರೋನ ನಡುವೆಯೂ ವಿಕ್ಟೋರಿಯಾದಲ್ಲಿ ನೂರು ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ
ಬೆಂಗಳೂರು, ಜು.17: ಬೆಡ್‍ಗಳ ಕೊರತೆ, ವೈದ್ಯರ ನಿರ್ಲಕ್ಷ್ಯದಿಂದ ಸಾವುಗಳು ಸಂಭವಿಸುತ್ತಿವೆ ಎಂಬ ಅಪವಾದದ ನಡುವೆಯೂ 100 ಮಂದಿ ಸೋಂಕಿತ ಗರ್ಭಿಣಿಯರಿಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.
ಕೊರೋನ ಸಮಯದಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡುವುದು ಬಹಳ ಕಷ್ಟದ ಸಮಯದಲ್ಲೂ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದು, ಕೊರೋನ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವಿಕ್ಟೋರಿಯಾ ಆಸ್ಪತ್ರೆ ಈ ಸಂದರ್ಭದಲ್ಲಿ 100ನೇ ಕೊರೋನ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಪೂರೈಸುವ ಮೂಲಕ ಇನ್ನೊಂದು ವಿಶೇಷ ಮೈಲಿಗಲ್ಲು ಸಾಧಿಸಿದೆ. ಇದಕ್ಕೆ ಶ್ರಮಿಸಿದ ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗೆ ನನ್ನ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‍ನಲ್ಲಿ 'ಮಕ್ಕಳಿಗೆ ಸೋಂಕು ತಗಲದಂತೆ ಎಚ್ಚರ ವಹಿಸಿ ಈವರೆಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಸುಮಾರು 350 ಕೊರೋನ ಸೋಂಕಿತ ಗರ್ಭಿಣಿಯರಿಗೆ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲ ನವಜಾತ ಶಿಶುಗಳಿಗೂ ಕೊರೋನ ನೆಗಟಿವ್ ಬಂದಿದ್ದು ತಾಯಂದಿರು- ಶಿಶುಗಳು ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದ್ದಾರೆ.