ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ದಲಿತ ವಿರೋಧಿ: ದಲಿತ ಹಕ್ಕುಗಳ ಸಮಿತಿ

Update: 2020-07-17 18:20 GMT

ಬೆಂಗಳೂರು, ಜು. 17: ದಲಿತರಿಗೆ ಭೂಮಿಯ ಹಕ್ಕು ಒದಗಿಸಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ದಲಿತರಿಗೆ ವಿರೋಧಿಯಾಗಿದ್ದು, ಕಾಯ್ದೆ ತಿದ್ದುಪಡಿ ಮೂಲಕ ಕಾರ್ಪೋರೇಟ್ ಕಂಪೆನಿಗಳಿಗೆ ದಲಿತರ ಭೂಮಿ ಹಸ್ತಾಂತರಿಸುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ದಲಿತ ಹಕ್ಕುಗಳ ಸಮಿತಿ ಆಗ್ರಹಿಸಿದೆ.

ಕೊರೋನ ಸೋಂಕು ಜನ ಜೀವನವನ್ನು ಅಸ್ಥಿರಗೊಳಿಸುತ್ತಿದ್ದು, ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ 10ಕೆಜಿ ಅಕ್ಕಿ, ಒಂದು ಕೆಜಿ ಬೆಳೆ ನೀಡುವುದು ಪರಿಹಾರವಲ್ಲ. ಸರಕಾರ ಕೂಡಲೇ ಪ್ರತಿ ಕುಟುಂಬಕ್ಕೆ 7,500 ರೂ. ಮಾಸಿಕ ಪರಿಹಾರ ನೀಡಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನರೇಗಾ ಮೂಲಕ ಉದ್ಯೋಗ ನೀಡಬೇಕು ಎಂದು ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಆಗ್ರಹಿಸಿದ್ದಾರೆ.

ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಮುಂಬೈನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News