ಕೋವಿಡ್‍ಗೆ ಬಲಿಯಾದ ಪೌರಕಾರ್ಮಿಕರಿಗೆ ಪರಿಹಾರ ನೀಡಲು ಆಗ್ರಹಿಸಿ ಎಐಎಂಎಸ್‍ಎಸ್ ಮೌನ ಚಳವಳಿ

Update: 2020-07-18 10:58 GMT

ಬೆಂಗಳೂರು, ಜು. 18: ಮಾರಕ ಕೊರೋನ ಸೋಂಕಿನಿಂದ ಸಾವನ್ನಪ್ಪಿದ ಪೌರ ಕಾರ್ಮಿಕರಿಗೆ ತಕ್ಷಣವೇ ರಾಜ್ಯ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಎಐಎಂಎಸ್‍ಎಸ್ ನಗರದಲ್ಲಿ ಮೌನ ಚಳವಳಿ ನಡೆಸಿತು.

ಶನಿವಾರ ನಗರದಲ್ಲಿ ಎಐಎಂಎಸ್‍ಎಸ್ ನೇತೃತ್ವದಲ್ಲಿ ಚಳವಳಿ ನಡೆಸಿದ ಪೌರ ಕಾರ್ಮಿಕರು, ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ನಗರ ಇಂದು ಕೋವಿಡ್ ಸಿಟಿಯಾಗುತ್ತ ದಾಪುಗಾಲಿಡುತ್ತಿದೆ. ಬೆಂಗಳೂರು ನಗರ ಒಂದರಲ್ಲೇ ಕೋವಿಡ್-19 ಸೋಂಕಿತರ ಸಂಖ್ಯೆ 20ಸಾವಿರದ ಗಡಿ ದಾಟಿದೆ. ಈ ಸಂದರ್ಭದಲ್ಲೂ ಪ್ರತಿನಿತ್ಯ ಪೌರಕಾರ್ಮಿಕರು ಕಂಟೈನ್ಮೆಂಟ್ ವಲಯಗಳನ್ನೊಳಗೊಂಡ ನಗರದ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೋವಿಡ್ ತಡೆಗಟ್ಟುವಲ್ಲಿ ಕೊರೋನ ವಾರಿಯರ್ಸ್ ಗಳಾಗಿ ಕೆಲಸ ನಿರ್ವಹಿಸುತ್ತಿರುವ ಇವರನ್ನು ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಮಾಧ್ಯಮಗಳಲ್ಲಿ ವರದಿಯಾದಂತೆ ಈಗಾಗಲೇ ಮೂವರು ಪೌರಕಾರ್ಮಿಕರು ಸಕಾಲಕ್ಕೆ ಸೂಕ್ತ ವೈದ್ಯಕೀಯ ನೆರವು ಸಿಗದೇ ಸಾವನ್ನಪ್ಪಿರುವ ಸುದ್ದಿ ನಿಜಕ್ಕೂ ಶೋಚನೀಯ ಸ್ಧಿತಿಯಾಗಿದೆ. ಈ ಹಿಂದೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ 98 ಪೌರಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ 23 ಮಂದಿಗೆ ಸೋಂಕು ದೃಢಪಟ್ಟಿತ್ತು. ಇಷ್ಟಾದಮೇಲೂ ಸರಕಾರವಾಗಲಿ, ಬಿಬಿಎಂಪಿ ಅಧಿಕಾರಿಗಳಾಗಲಿ ಕಾರ್ಮಿಕರ ನೆರವಿಗೆ ಬಂದಿಲ್ಲ ಎಂದು ಆರೋಪಿಸಲಾಗಿದೆ.

ಪೌರ ಕಾರ್ಮಿಕರಿಗೆ ಅವಶ್ಯಕವಾದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಇ ಕಿಟ್‍ಗಳು ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಕೂಡಲೇ ಒದಗಿಸಬೇಕು. ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಆರೋಗ್ಯ ಸೌಲಭ್ಯ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಎಐಎಂಎಸ್‍ಎಸ್ ಒತ್ತಾಯಿಸಿದರು. ನೂರಾರು ಪೌರ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News