ಖಾಸಗಿ ಆಸ್ಪತ್ರೆಗಳಿಗೆ ಸರಕಾರದ ಶುಲ್ಕ ಶೀಘ್ರದಲ್ಲಿ ಪಾವತಿ: ಸಚಿವ ಎಸ್.ಟಿ.ಸೋಮಶೇಖರ್

Update: 2020-07-18 14:11 GMT

ಬೆಂಗಳೂರು, ಜು.18: ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದಿಂದ ದಾಖಲಾಗುವ ಕೋವಿಡ್ ಸೋಂಕಿತರಿಗೆ ತಗಲುವ ಶುಲ್ಕವನ್ನು 15 ದಿನಗಳಲ್ಲಿ ಸರಕಾರದಿಂದ ಪಾವತಿ ಮಾಡುವ ಬಗ್ಗೆಯೂ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದ್ದು, ಶೀಘ್ರದಲ್ಲೆ ಕ್ರಮವಹಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಶನಿವಾರ ನಗರದ ಸುರಾನಾ ಕಾಲೇಜಿನಲ್ಲಿ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಲಕ್ಷ್ಮೀದೇವಿನಗರ ವಿಭಾಗದ ಕಾರ್ಪೋರೇರೇಟರ್ ಗಳು, ಖಾಸಗಿ ಆಸ್ಪತ್ರೆಗಳು, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ನಾವು ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಿಗೆ ಬೆದರಿಕೆ ಹಾಕಲ್ಲ. ಯಾವುದೇ ಅಧಿಕಾರಿ ನಿಮಗೆ ಬೆದರಿಕೆ ಹಾಕಿದಲ್ಲಿ ನನಗೆ ಇಲ್ಲವೇ ಐಎಎಸ್ ಅಧಿಕಾರಿ ವಿಶಾಲ್ ಅವರ ಗಮನಕ್ಕೆ ತಂದರೆ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸೋಮಶೇಖರ್ ತಿಳಿಸಿದರು.

ಮುಖ್ಯಮಂತ್ರಿಯು ಬೆಂಗಳೂರಿನ 8 ವಲಯದ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ನಾವು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ಒತ್ತಡ ಹಾಕುವುದಿಲ್ಲ. ಕೋವಿಡ್‍ನಿಂದ ಮೃತಪಟ್ಟ ಪ್ರಕರಣದಲ್ಲೂ ಮೃತದೇಹವನ್ನು ಶೀಘ್ರದಲ್ಲಿ ಹಸ್ತಾಂತರಿಸುವ  ಬಗ್ಗೆಯೂ ಕ್ರಮ ವಹಿಸಲಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ಪತ್ರದ ಮೂಲಕ ಮಾಹಿತಿ ಕೊಟ್ಟರೆ ಬಗೆಹರಿಸಲಾಗುವುದು ಎಂದು ಸೋಮಶೇಖರ್ ತಿಳಿಸಿದರು.

ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥ ವಿಶಾಲ್ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಸರಕಾರದ ನಿಯಮದಂತೆ ಶೇ.50 ಸೌಲಭ್ಯವನ್ನು ಕೋವಿಡ್ 19 ರೋಗಿಗಳಿಗೆ ನೀಡಬೇಕು. ಇನ್ನು ಸಭೆಯಲ್ಲಿ ವ್ಯಕ್ತವಾದಂತೆ ಸರಕಾರದ ಕಡೆಯಿಂದ ದಾಖಲಾದ ರೋಗಿಗಳ ವೆಚ್ಚವನ್ನು ಆದಷ್ಟು ಬೇಗ ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಬಿಬಿಎಂಪಿ ವೈದ್ಯಾಧಿಕಾರಿಗಳು ಮಾತ್ರ ಸಹಿ ಹಾಕಿ ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದ್ದಾರೆ ಎಂದು ಅವರು ಹೇಳಿದರು.

ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳು, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳು, ಸ್ವಯಂಸೇವಕ ಸಂಘಗಳು, ಎನ್ ಜಿ ಒ ಮುಖ್ಯಸ್ಥರು ಸೇರಿದಂತೆ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News