ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವು: ಸಿಎಂ ಕಚೇರಿ ಮುಂಭಾಗ ಪುತ್ರಿಯ ಫೋಟೋ ಹಿಡಿದು ತಂದೆಯ ಮೌನ ಪ್ರತಿಭಟನೆ
ಬೆಂಗಳೂರು, ಜು.18: ಆಸ್ಪತ್ರೆ ಮತ್ತು ಸರಕಾರದ ನಿರ್ಲಕ್ಷದಿಂದ ಮತ್ತಷ್ಟು ಮಕ್ಕಳ ಪ್ರಾಣ ಹೋಗಬಾರದೆಂದು ಮನವಿ ಮಾಡುತ್ತಾ ಮುಖ್ಯಮಂತ್ರಿ ಗೃಹ ಕಚೇರಿ ಬಳಿ ತನ್ನ ಪುತ್ರಿಯ ಭಾವಚಿತ್ರ ಹಿಡಿದು ವ್ಯಕ್ತಿಯೊಬ್ಬರು ಮೌನ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಶನಿವಾರ ಇಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಬಳಿ ಆಗಮಿಸಿದ ವೆಂಕಟೇಶ್ ಎಂಬವರು, ಇತ್ತೀಚಿಗೆ ನಿಧನ ಹೊಂದಿದ ತನ್ನ ಒಂದು ತಿಂಗಳ ಪುತ್ರಿಯ ಭಾವಚಿತ್ರ ಹಿಡಿದು ಮೌನವಾಗಿ ಪ್ರತಿಭಟಿಸಿ, ಸರಕಾರ ಎಚ್ಚತ್ತುಕೊಳ್ಳಲಿ ಎಂದು ಮನವಿ ಮಾಡಿಕೊಂಡರು.
ತನ್ನ ಮಗುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದೆಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಅವಲತ್ತುಕೊಂಡ ಅವರು, ಆದಷ್ಟು ಬೇಗ ಖಾಸಗಿ ಆಸ್ಪತ್ರೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ನೀವು ತಡ ಮಾಡಿದಷ್ಟು ಮತ್ತಷ್ಟು ಜೀವಗಳು ಹೋಗುತ್ತವೆ ಎಂದು ನುಡಿದರು.
ಏನಿದು ಪ್ರಕರಣ?: ಜು.11ರಂದು ಬೆಂಗಳೂರಿನ ಮಂಜುನಾಥ ನಗರದ ನಿವಾಸಿ ವೆಂಕಟೇಶ್ ಅವರ ಒಂದು ತಿಂಗಳ ಮಗುವಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟಿತ್ತು ಎನ್ನಲಾಗಿದೆ. ಈ ಘಟನೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲೂ ಇವರ ಪುತ್ರಿಯ ಭಾವಚಿತ್ರಗಳು ಹರಿದಾಡಿದ್ದವು.
ವಶಕ್ಕೆ: ಲಾಕ್‍ಡೌನ್ ಹಿನ್ನೆಲೆ ಪ್ರತಿಭಟನೆ ನಡೆಸಲು ಅವಕಾಶ ಇಲ್ಲದ ಹಿನ್ನೆಲೆ ಪ್ರತಿಭಟನೆ ನಿರತ ತಂದೆ ವೆಂಕಟೇಶ್ ಅವರನ್ನು ಪೊಲೀಸ್ ವಶಕ್ಕೆ ಪಡೆದರು.
ಎರಡು ಕಡೆ ಪ್ರತಿಭಟನೆ
ಮೊದಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸದ ಮುಂಭಾಗ ವೆಂಕಟೇಶ್ ಪ್ರತಿಭಟನೆ ನಡೆಸಿದರು. ಬಳಿಕ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾ ಬಳಿಯೂ ಪ್ರತಿಭಟಿಸಿ ಅಳಲು ತೊಡಿಕೊಂಡರು.