×
Ad

ಬೆಂಗಳೂರಿನ ಆಸ್ಪತ್ರೆಯದ್ದು ಎಂದು ನಕಲಿ ವಿಡಿಯೋ ಹರಿಬಿಟ್ಟ ವ್ಯಕ್ತಿ ಸಿಸಿಬಿ ಬಲೆಗೆ

Update: 2020-07-19 21:11 IST

ಬೆಂಗಳೂರು, ಜು.19: ಕೋವಿಡ್-19 ಸಂಬಂಧ ನಗರದ ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ಹೇಳಿ ನಕಲಿ ವಿಡಿಯೊ ಹರಿಬಿಟ್ಟಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಇಲ್ಲಿನ ತಿಲಕನಗರ ನಿವಾಸಿ ಸಮೀರವುಲ್ಲಾ(41) ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿಡಿಯೊ ಅನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದ. ಅದು ವೈರಲ್ ಆಗಿತ್ತು. ಈ ವಿಡಿಯೊ ನಕಲಿ ಎಂಬುದನ್ನು ತಿಳಿದ ಸಿಸಿಬಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇತರೆ ರಾಜ್ಯದ ವಿಡಿಯೊವನ್ನು ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ಆರೋಪಿ ಬರೆದುಕೊಂಡಿದ್ದ. ವೈದ್ಯರ ಕೊಠಡಿ ಎದುರು ಜನರು ಗುಂಪಾಗಿ ನಿಂತುಕೊಂಡಿದ್ದರು. ಜನ ಸಂದಣಿಯೂ ಹೆಚ್ಚಿರುವ ದೃಶ್ಯ ವಿಡಿಯೊದಲ್ಲಿತ್ತು. ಪರಿಶೀಲನೆ ನಡೆಸಿದಾಗ ಇದು ವಿಕ್ಟೊರಿಯಾ ಆಸ್ಪತ್ರೆಯದ್ದು ಅಲ್ಲವೆಂಬುದು ತಿಳಿಯಿತು ಎಂದು ಸಿಸಿಬಿ ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪೊಲೀಸ್ ಇಲಾಖೆ ಸ್ಪಷ್ಟನೆ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ವೈದ್ಯರಿಗಾಗಿ ಕಾಯುತ್ತಿದ್ದ ದೃಶ್ಯ ಎಂದು ಅಲ್ಲಿನ ಅವ್ಯವಸ್ಥೆಯನ್ನು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೊ ನಕಲಿಯಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ, ಎನ್‍ಡಿಎಂ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 505ರಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ವಿಡಿಯೊಗಳನ್ನು ಸಾರ್ವಜನಿಕರು ಯಾರಿಗೂ ಕಳುಹಿಸಬಾರದು. ಕೊರೋನ ಸಂದರ್ಭದಲ್ಲಿ ಜನರಲ್ಲಿ ಆತಂಕ ಮೂಡಿಸುವ ಇಂತಹ ವಿಡಿಯೋಗಳ ಬಗ್ಗೆ ಜನರು ಎಚ್ಚರಿಕೆ ವಹಿಸಿಬೇಕು ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News