ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ: ಕೊರೋನ ಸೋಂಕಿತ ವೃದ್ಧನನ್ನು ರಾಜಭವನಕ್ಕೆ ಕೊಂಡೊಯ್ದ ಕುಟುಂಬ
ಬೆಂಗಳೂರು, ಜು.18: ಬೆಂಗಳೂರು ನಗರದಲ್ಲಿ ರವಿವಾರ ಒಂದೇ ದಿನ 2,125 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 36 ಜನರು ಮೃತರಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 24,316 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ನಗರದಲ್ಲಿ 667 ಜನರು ಸೋಂಕಿಗೆ ಬಲಿಯಾಗಿದ್ದು, 6793 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 28,951 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಚಿಕಿತ್ಸೆ ಸಿಗಲಿಲ್ಲವೆಂದು ರಾಜಭವನಕ್ಕೆ ಹೋದ ಕುಟುಂಬ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಕುಟುಂಬಸ್ಥರು ಸೋಂಕಿತನನ್ನು ಆ್ಯಂಬುಲನ್ಸ್ ಮೂಲಕ ರಾಜಭವನಕ್ಕೆ ತೆರಳಿದ ಘಟನೆ ರವಿವಾರ ನಡೆದಿದೆ ಎನ್ನಲಾಗಿದೆ.
80 ವರ್ಷದ ವೃದ್ಧರೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ರವಿವಾರ ನಾಲ್ಕು ಆಸ್ಪತ್ರೆಗಳನ್ನು ಅಲೆದಿದ್ದಾರೆ. ಆದರೆ, ಎಲ್ಲ ಕಡೆಯೂ ಬೆಡ್ ಖಾಲಿ ಇಲ್ಲ ಎಂದಿದ್ದಾರೆ. ಹೀಗಾಗಿ ವೃದ್ಧನ ಕುಟುಂಬಸ್ಥರು ಕೊನೆಗೆ ಅವರನ್ನು ಆ್ಯಂಬುಲೆನ್ಸ್ ನಲ್ಲೇ ರಾಜಭವನಕ್ಕೆ ಕರೆತಂದಿದ್ದಾರೆ. ದಯಮಾಡಿ ಯಾರಾದರೂ ನಮಗೆ ಸಹಾಯ ಮಾಡಿ ಎಂದು ಗೇಟ್ ಬಳಿಯಿದ್ದ ಭದ್ರತಾ ಸಿಬ್ಬಂದಿಗೆ ಮೊರೆಯಿಟ್ಟಿದ್ದಾರೆ. ಭದ್ರತಾ ಸಿಬ್ಬಂದಿ ವೃದ್ಧನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು. ಹೀಗಾಗಿ, ಕುಟುಂಬಸ್ಥರು ಸಂಜಯ್ ಗಾಂಧಿ ಆಸ್ಪತ್ರೆಗೆ ತೆರಳಿ ವೃದ್ಧರನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಚಿಕಿತ್ಸೆ ಸಿಗದೇ ಮಹಿಳೆ ಸಾವು: ನಗರದ ಹಲವು ನರ್ಸಿಂಗ್ ಹೋಮ್ ಗಳು, ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ನೀಡದ ಕಾರಣ ಕಲಾಸಿಪಾಳ್ಯದ 45 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲವು ಆಸ್ಪತ್ರೆಗಳಿಗೆ ಅಲೆದ ಸೋಂಕಿತೆಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿದರೂ ಮಹಿಳೆ ಬದುಕಲಿಲ್ಲ. ಇದೀಗ ಮಹಿಳೆಯ ಮೃತದೇಹದ ಅಂತ್ಯಕ್ರಿಯೆ ಮಾಡಲು ಪಾಲಿಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆತಂಕ ದೂರ ಮಾಡಿದ ಸಿಬ್ಬಂದಿ: ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ವಾರ್ಡಿನಲ್ಲಿದ್ದ ರೋಗಿಗಳಲ್ಲಿ ಆತಂಕ ಸೃಷ್ಟಿಸಿದೆ. ಇದನ್ನು ದೂರ ಮಾಡಲು ಸಿಬ್ಬಂದಿ ಹಾಡು, ನೃತ್ಯಗಳ ಮೂಲಕ ಅವರಲ್ಲಿ ಭೀತಿ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.
ಬದುಕಿದ್ದಾಗ ನೆಗೆಟಿವ್, ಮೃತಪಟ್ಟಾಗ ಪಾಸಿಟಿವ್ !
ಬದುಕಿದ್ದಾಗ ವ್ಯಕ್ತಿಯ ಕೊರೋನ ವರದಿ ನೆಗೆಟಿವ್ ಬಂದು, ವ್ಯಕ್ತಿ ಮೃತಪಟ್ಟ ಬಳಿಕ ಕೊರೋನ ಪರೀಕ್ಷೆ ಮಾಡಿದಾಗ ಪಾಸಿಟಿವ್ ವರದಿ ಬಂದ ಘಟನೆ ನಡೆದಿದೆ ಎನ್ನಲಾಗಿದೆ.
ಮಂಗಳವಾರ 54 ವರ್ಷದ ವ್ಯಕ್ತಿಯೊಬ್ಬರನ್ನು ತೀವ್ರ ಉಸಿರಾಟದ ತೊಂದರೆಯಿಂದಾಗಿ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸ್ವಾಬ್ ಟೆಸ್ಟ್ ಮಾಡಿದಾಗ ಕೊರೋನ ನೆಗೆಟಿವ್ ಎಂದು ರಿಪೋರ್ಟ್ ಬಂದಿದೆ. ಆದರೆ, ಬಳಿಕ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವ್ಯಕ್ತಿ ಮೃತಪಟ್ಟ ಬಳಿಕ ಕೊರೋನ ಪರೀಕ್ಷೆ ಮಾಡಿದ್ದು, ಪಾಸಿಟಿವ್ ವರದಿ ಬಂದಿದೆ.
ಬಸ್ ನಿಲ್ದಾಣ ಸ್ಯಾನಿಟೈಸರ್
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯು ರವಿವಾರ ಸ್ಯಾನಿಟೈಸ್ ಮಾಡಿದ್ದಾರೆ. ಲಾಕ್‍ಡೌನ್‍ಗೂ ಮುಂಚೆ ಈ ನಿಲ್ದಾಣದಿಂದ ಸಾವಿರಾರು ಜನರು ಪ್ರಯಾಣ ಬೆಳೆಸಿದ್ದರು. ಸದ್ಯ ಯಾವುದೇ ಬಸ್ ಸಂಚಾರ ಇಲ್ಲದೇ ಖಾಲಿ ಖಾಲಿಯಾಗಿರುವ ಬಸ್ ನಿಲ್ದಾಣದಲ್ಲಿ ಒಟ್ಟು 6 ಅಗ್ನಿಶಾಮಕ ವಾಹನಗಳನ್ನು ಬಳಸಿ, 100ಕ್ಕೂ ಹೆಚ್ಚು ಸಿಬ್ಬಂದಿಯು ಸ್ಯಾನಿಟೈಸ್ ಮಾಡಿದರು.
ಮನೆಯಲ್ಲಿ ಮೃತಪಟ್ಟವರಿಗೆ ಸೋಂಕು ಪರೀಕ್ಷೆ
ಅನ್ಯ ಕಾರಣದಿಂದ ಮನೆಯಲ್ಲಿ ಮೃತಪಟ್ಟರೂ, ಅವರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲು ಪಾಲಿಕೆ ನಿರ್ಧರಿಸಿದೆ. ಸೋಂಕಿನ ಲಕ್ಷಣ ಅಥವಾ ಇತರೆ ಸಮಸ್ಯೆಯಿಂದ ವ್ಯಕ್ತಿ ಮೃತಪಟ್ಟಿದ್ದರೆ ಅವರಿಗೂ ಕೋವಿಡ್ ಪರೀಕ್ಷೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ಹಾಗಾಗಿ, ಮನೆಯಲ್ಲಿ ಮೃತಪಟ್ಟವರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಕುಟುಂಬದವರಿಗೆ ಸೂಚಿಸಿದೆ. ಮಾಹಿತಿ ದೊರೆತ ಕೂಡಲೇ ವೈದ್ಯರ ತಂಡ ಮೃತರ ಮನೆಗೆ ಬಂದು ಗಂಟಲು ದ್ರವ ಸಂಗ್ರಹಿಸಲಿದ್ದಾರೆ. ಫಲಿತಾಂಶ ಬಂದ ನಂತರ ಪಾಸಿಟಿವ್ ಇದ್ದರೆ ಕುಟುಂಬಸ್ಥರನ್ನ ಕ್ವಾರಂಟೈನ್ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.