'ಬೆಂಗಳೂರಿನಲ್ಲಿ ಮಂಗಳವಾರದ ಬಳಿಕವೂ ಲಾಕ್​ಡೌನ್' ಬಗ್ಗೆ ಗೃಹ ಸಚಿವ ಬೊಮ್ಮಾಯಿ ಸ್ಪಷ್ಟನೆ

Update: 2020-07-19 18:01 GMT

ಬೆಂಗಳೂರು, ಜು.19: ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಸೋಂಕಿನ ಪ್ರಮಾಣ ತಗ್ಗಿಸಲು ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ, ಮಂಗಳವಾರ ಬಳಿಕ ಲಾಕ್‍ಡೌನ್ ಅಂತ್ಯವಾಗಲಿದೆ. ನಂತರ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಮುಂದುವರಿಸುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.

ರವಿವಾರ ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕ ದಳದಿಂದ ಸ್ಯಾನಿಟೈಸ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಒಂದು ವಾರಗಳ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಬೆಳಗ್ಗೆ 12 ಗಂಟೆ ವರೆಗೆ ತರಕಾರಿ ಹಾಲು ಸೇರಿದಂತೆ ಎಲ್ಲ ರೀತಿಯ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡಿದ ವಾಹನಗಳನ್ನು ಜಪ್ತಿ ಮಾಡಿದ್ದೇವೆ ಎಂದರು.

ಕೊರೋನ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಕಾರಣಕ್ಕೆ ಮಂಗಳವಾರದ ನಂತರ ಬೆಂಗಳೂರಿನಲ್ಲಿ ಲಾಕ್ ಡೌನ್ ಮುಂದುವರೆಯುವುದಿಲ್ಲ. ಅಲ್ಲದೆ, ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆಂದು ಅವರು ಹೇಳಿದರು.

ಸ್ಯಾನಿಟೈಸ್: ಕೋವಿಡ್ ಪ್ರಾರಂಭವಾದ ಬಳಿಕ ನಗರ ಹಲವು ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡುತ್ತಿದ್ದೇವೆ. ಈಗಾಗಲೇ ಐವತ್ತು ವಾಹನಗಳನ್ನು ನಗರದಲ್ಲಿ ನಿಯೋಜಿಸಿದ್ದು, ಪ್ರತಿ ದಿನ 40 ಪ್ರದೇಗಳಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಆಸ್ಪತ್ರೆ, ರೈಲ್ವೆ ನಿಲ್ದಾಣ, ಎಪಿಎಂಸಿ ಸೇರಿ ಹಲವೆಡೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News