ಸೋಂಕಿತರು ಬಳಸಿದ ಹಾಸಿಗೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಿದರೆ ಆಂದೋಲನ: ಡಿಕೆಶಿ ಎಚ್ಚರಿಕೆ

Update: 2020-07-20 15:16 GMT

ಬೆಂಗಳೂರು, ಜು. 20: ಕೋವಿಡ್ ಸೋಂಕಿತರು ಬಳಸಿದ ಹಾಸಿಗೆಗಳನ್ನು ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಸರಕಾರದ ತೀರ್ಮಾನದ ವಿರುದ್ಧ ಆಂದೋಲನ ಆರಂಭಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.

ಸೋಮವಾರ ಕೋವಿಡ್-19 ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ವೈಫಲ್ಯ, ವೈದ್ಯಕೀಯ ಸಲಕರಣೆ ಖರೀದಿಯಲ್ಲಿನ ಭ್ರಷ್ಟಾಚಾರ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಹಿರಿಯ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಸರಕಾರ 10 ಸಾವಿರವೋ, 20 ಸಾವಿರವೋ ಹಾಸಿಗೆಗಳನ್ನು ಖರೀದಿಸುತ್ತಿದೆ. ಮೊದಲು ಒಂದಕ್ಕೆ ಮೂರರಷ್ಟು ದರ ನಿಗದಿ ಮಾಡಿ ಬಾಡಿಗೆಗೆ ಎಂದರು, ಇದೀಗ ಖರೀದಿ ಮಾಡುವುದಾಗಿ ಹೇಳುತ್ತಿದೆ. ಅವುಗಳನ್ನು ಬಳಕೆ ಮಾಡಿದ ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡಲು ಅಧಿಕಾರಿಗಳು ಮಾಡಿರುವ ಸಲಹೆಯನ್ನು ಸರಕಾರ ಒಪ್ಪಿದೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದರು.

ಈ ದೇಶದಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಪ್ರಜ್ಞಾವಂತಿಕೆ ಇರಬೇಕು. ಸೋಂಕಿನಿಂದ ಸತ್ತವರ ದೇಹವನ್ನು ಮುಟ್ಟಲು ಹಿಂದೆ-ಮುಂದೆ ನೋಡುತ್ತಿರುವ ಈ ಸರಕಾರ ಈಗ ಸೋಂಕಿತರು ಬಳಸಿದ ಹಾಸಿಗೆ ವಸ್ತುಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳು, ನಮ್ಮ ಹಳ್ಳಿ ಮಕ್ಕಳಿಗೆ ಹೇಗೆ ನೀಡುತ್ತಾರೆ? ಇವರಿಗೇನಾದರೂ ಬುದ್ಧಿ ಇದೆಯೇ? ಇವರು ಎಂತೆಂಥ ಸಲಹೆಗಾರರು, ಅಧಿಕಾರಿಗಳನ್ನು ಇಟ್ಟುಕೊಂಡಿದ್ದಾರೆ, ಸರಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಇದು ಬಹುದೊಡ್ಡ ಸಾಕ್ಷಿ. ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಿವಕುಮಾರ್ ಎಚ್ಚರಿಸಿದ್ದಾರೆ.

ಬೇಕಾದರೆ ಆ ಹಾಸಿಗೆಗಳನ್ನು ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ಮನೆಗೆ ತೆಗೆದುಕೊಂಡು ಹೋಗಿ ಬಳಸಿಕೊಳ್ಳಲಿ. ಅವರ ಮಕ್ಕಳಿಗೆ ಕೊಡಲಿ. ಆದರೆ, ಹಳ್ಳಿ ಮಕ್ಕಳು ಹಾಗೂ ವಿದ್ಯಾರ್ಥಿ ಹಾಸ್ಟೆಲ್‍ಗಳಲ್ಲಿ ಇವುಗಳನ್ನು ಬಳಸಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ಮಕ್ಕಳನ್ನು ಸೋಂಕಿನ ಅಪಾಯಕ್ಕೆ ದೂಡಲು ಬಿಡಲ್ಲ. ವಿದ್ಯಾರ್ಥಿಗಳು, ಪೋಷಕರು, ಯುವಕರು, ಹೆಣ್ಣುಮಕ್ಕಳು ಇದರ ವಿರುದ್ಧ ಧ್ವನಿ ಎತ್ತಬೇಕು, ಹೋರಾಡಬೇಕು. ಹಳ್ಳಿ ಮಕ್ಕಳು, ಬಡವರ ಮಕ್ಕಳ ಜೀವದ ಜತೆ ಸರಕಾರ ಚೆಲ್ಲಾಟವಾಡಲು ಬಿಡಲ್ಲ. ಇದರ ವಿರುದ್ಧ ಆಂದೋಲನ ಆರಂಭಿಸುತ್ತೇವೆ ಎಂದರು.

ಜನರ ನೆರವಿಗೆ ಧಾವಿಸುತ್ತೇವೆ: ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಧೈರ್ಯ ತುಂಬಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ಈ ಸಮಯದಲ್ಲಿ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಕೇಂದ್ರದ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ನಾವು ಸುಮ್ಮನೆ ಕೂರಲು ಆಗುವುದಿಲ್ಲ. ಕಷ್ಟದಲ್ಲಿರುವವರ ನೆರವಿಗೆ ಧಾವಿಸಬೇಕಾದದ್ದು ನಮ್ಮ ಧರ್ಮ. ನಮಗೇನೂ ಇದರಲ್ಲಿ ರಾಜಕೀಯ ಬೇಕಿಲ್ಲ. ಹಿರಿಯ ಮುಖಂಡರ ಜತೆ ಚರ್ಚಿಸಿ ಕಾರ್ಯಕ್ರಮ ರೂಪಿಸುತ್ತೇವೆ. ಅದರ ಸ್ವರೂಪವನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ರಾಜ್ಯ ಸರಕಾರ ಕೋವಿಡ್-19 ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ಚಿಕಿತ್ಸಾ ಸಲಕರಣೆ ಖರೀದಿಯಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಎಲ್ಲ ವಿಚಾರವನ್ನು ನಾವು ಜನರಿಗೆ ಮುಟ್ಟಿಸಬೇಕಿದೆ. ಅದು ನಮ್ಮ ಜವಾಬ್ದಾರಿಯೂ ಹೌದು. ಈ ಕಾರ್ಯಕ್ರಮ ಸ್ವರೂಪ ಹೇಗಿರುತ್ತದೆ, ಹಿರಿಯ ಮುಖಂಡರು, ಮಾಜಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಯಾವ, ಯಾವ ನಾಯಕರು ಎಲ್ಲಿಗೆ ಹೋಗುತ್ತಾರೆಂಬುದರ ವಿವರವನ್ನು ಶೀಘ್ರದಲ್ಲೇ ತಿಳಿಸುತ್ತೇವೆ.

ದೊಡ್ಡವರು ಬೇಕಾದ್ದು ಮಾತನಾಡಲಿ: ಕಾಂಗ್ರೆಸ್‍ನವರು ಜೆಡಿಎಸ್ ಅವರನ್ನು ನೋಡಿ ಕಲಿಯಲಿ ಎಂದು ಸಚಿವ ಆರ್.ಅಶೋಕ್ ನೀಡಿರುವ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರು ಅಧಿಕಾರದಲ್ಲಿದ್ದಾರೆ. ಅವರು ದೊಡ್ಡವರು, ಏನು ಬೇಕಾದರೂ ಹೇಳಲಿ. ಅಶೋಕ್ ಅಣ್ಣನಷ್ಟೇ ಅಲ್ಲ, ಶ್ರೀರಾಮುಲು ಅಣ್ಣಾ, ಸುಧಾಕರಣ್ಣಾ, ಯಡಿಯೂರಪ್ಪನವರು ಸೇರಿದಂತೆ ಮಂತ್ರಿ ಮಂಡಲದ ಯಾರು ಬೇಕಾದರೂ ಏನನ್ನಾದರೂ ಹೇಳಲಿ. ಅವರಿಗೆ ಅನಿಸಿದ್ದು ಅವರು ಮಾಡಲಿ. ನಾವು ಜನರ ಜತೆ ಇರಲು ಬಯಸುತ್ತೇವೆ ಎಂದರು.

ಕೋವಿಡ್ ಸಲಕರಣೆಗಳ ಖರೀದಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ದಾಖಲೆಗಳಿವೆ. ಯಾರು, ಯಾರು ಏನು ಮಾಡಿದ್ದಾರೆಂಬ ಬಗ್ಗೆ ವಿವರಗಳಿವೆ. ಒಂದೇ ವಸ್ತುವಿಗೆ ತಮಿಳುನಾಡಿನಲ್ಲಿ ಎಷ್ಟು, ರಾಜ್ಯದಲ್ಲಿ ಎಷ್ಟು ಮೊತ್ತ ನೀಡಿದ್ದಾರೆ ಎಂಬುದು ಗೊತ್ತಿದೆ. ಅವರು ಹೇಳುವುದನ್ನು ಅವರು ಹೇಳಲಿ. ನಮ್ಮ ಬಳಿ ಇರುವ ದಾಖಲೆಗಳನ್ನು ಜ ಜನರ ಮುಂದಿಡುತ್ತೇವೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News