ಹೆಚ್ಚುತ್ತಿರುವ ಬೆಂಗಳೂರಿನ ಆಸ್ಪತ್ರೆಗಳ ನಿರ್ಲಕ್ಷ್ಯ: ಆಟೋದಲ್ಲಿಯೇ ಮಹಿಳೆಗೆ ಹೆರಿಗೆ, ಮಗು ಮೃತ್ಯು

Update: 2020-07-20 16:26 GMT
ಸಾಂದರ್ಭಿಕ ಚಿತ್ರ

#ನಗರದಲ್ಲಿಂದು 1,452 ಮಂದಿಗೆ ಕೊರೋನ ದೃಢ: 31 ಸಾವು

ಬೆಂಗಳೂರು, ಜು.20: ನಗರದಲ್ಲಿ ಸೋಮವಾರ ಒಂದೇ ದಿನ 1,452 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 31 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 33,229 ಕೊರೋನ ಸೋಂಕು ಧೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 638 ಜನರು ಸೋಂಕಿಗೆ ಬಲಿಯಾಗಿದ್ದಾರೆ. 6,956 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಮವಾರ 163 ಜನರು ಗುಣಮುಖರಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 25,574 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 30,837 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ನಗರದಲ್ಲಿ 8,785 ಕಂಟೈನ್ಮೆಂಟ್ ಜೋನ್‍ಗಳಿದ್ದು, ಇದರಲ್ಲಿ 6,160  ಕಂಟೈನ್ಮೆಂಟ್ ಜೋನ್‍ಗಳು ಸಕ್ರಿಯವಾಗಿವೆ.

ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮಗು ಮೃತ್ಯು; ಆರೋಪ

ಶ್ರೀರಾಂಪುರದ ನಿವಾಸಿ ನಿವೇದಿತಾ(23) ಅವರಿಗೆ ರವಿವಾರ ರಾತ್ರಿ 2.30 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಡುರಾತ್ರಿ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ್, ಶ್ರೀರಾಂಪುರ ಸರಕಾರಿ ಆಸ್ಪತ್ರೆ ಹೀಗೆ ಹಲವು ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಆದರೂ, ಯಾವುದೇ ಆಸ್ಪತ್ರೆಯು ಗರ್ಭಿಣಿಯನ್ನು ದಾಖಲು ಮಾಡಿಕೊಂಡಿಲ್ಲ ಎನ್ನಲಾಗಿದೆ.

ಹೋದ ಕೆಲ ಆಸ್ಪತ್ರೆಗಳಲ್ಲಿ ಬೆಡ್‍ಗಳು ಖಾಲಿ ಇಲ್ಲ. ಚಿಕಿತ್ಸೆ ನೀಡುವ ವೈದ್ಯರಿಗೆ ಸೋಂಕು ದೃಢಪಟ್ಟಿದೆ ಎಂದರೆ, ಇನ್ನು ಕೆಲ ಆಸ್ಪತ್ರೆಗಳ ಸಿಬ್ಬಂದಿ ಗರ್ಭಿಣಿಗೆ ಕೊರೋನ ಪರೀಕ್ಷೆ ಮಾಡಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಆದರೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ರಾತ್ರಿಯಿಡೀ ಸುತ್ತಾಡಿ ಸುಸ್ತಾಗಿದ್ದ ಗರ್ಭಿಣಿ ಕೊನೆಗೆ ಕೆ.ಸಿ. ಜನರಲ್ ಆಸ್ಪತ್ರೆಗೆ ಬಂದಿದ್ದು, ಅಲ್ಲಿಯೂ ಕೂಡಾ ಮಹಿಳೆಯನ್ನು ದಾಖಲಿಸಲು ತಡ ಮಾಡಿದ್ದಾರೆ ಎನ್ನಲಾಗಿದ್ದು, ಕೊನೆಗೆ ಮಹಿಳೆ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮಗು ಹುಟ್ಟುವಾಗಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಐದು ದಿನ ಆಸ್ಪತ್ರೆಗಳಿಗೆ ಅಲೆದಾಟ; ಮಹಿಳೆ ಮೃತ್ಯು

ಉಸಿರಾಟದ ತೊಂದರೆ, ಜ್ವರ ಕಾಣಿಸಿಕೊಂಡಿದ್ದ ಮಹಿಳೆಯನ್ನು ಐದು ದಿನಗಳ ಕಾಲ ವಿವಿಧ ಆಸ್ಪತ್ರೆಗಳಿಗೆ ಸೇರಿಸಲು ಅಲೆದಾಡಿದರೂ ಚಿಕಿತ್ಸೆ ಸಿಗದೇ ಮಹಿಳೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮೃತ ಸಹೋದರಿಯ ಮೃತದೇಹದ ಎದುರು ಸಹೋದರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

"ನಾವು ಮೂರು ದಿನ ಕೊರೋನ ರಿಪೋರ್ಟಿಗಾಗಿ ಆಸ್ಪತ್ರೆಯಲ್ಲಿ ಅಲೆದಾಡಿದ್ದೇವೆ. ಆಂಟಿಜೆನ್ ಮೂಲಕ ಕೋವಿಡ್ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಹೋದರೆ ಆಂಟಿಜೆನ್ ಟೆಸ್ಟಿಂಗ್ ರಿಪೋರ್ಟ್ ನಾವು ನಂಬಲ್ಲ. ಆರ್‍ಟಿಪಿಸಿಆರ್ ಲ್ಯಾಬ್ ರಿಪೋರ್ಟ್ ಬೇಕು ಎಂದು ಹೇಳಿದರು. ಕೊನೆಗೆ ಐದು ದಿನ ಆಸ್ಪತ್ರೆಗೆ ಅಲೆದಾಟ ಮಾಡಿದರೂ ಚಿಕಿತ್ಸೆ ಸಿಗದೆ ನಮ್ಮ ಅಕ್ಕ ಮೃತಪಟ್ಟಿದ್ದಾರೆ" ಎಂದು ಮೃತಳ ತಮ್ಮ ಆರೋಪಿಸಿದ್ದಾರೆ.

ಉಪ ಮೇಯರ್ ಅಟೆಂಡರ್ ಗೆ ಕೊರೋನ

ಬಿಬಿಎಂಪಿ ಉಪ ಮೇಯರ್ ರಾಮ್ ಮೋಹನ್‍ರಾಜ್ ಅವರ ಅಟೆಂಡರ್ ಗೆ ಕೊರೋನ ಸೋಂಕು ತಗುಲಿದ್ದು, ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಉಪ ಮೇಯರ್ ಸೇರಿದಂತೆ ಕಚೇರಿಯಲ್ಲಿ ಕೆಲಸ ಮಾಡುವ 10ಕ್ಕೂ ಅಧಿಕ ಸಿಬ್ಬಂದಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News