ಅಂ.ರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸುತ್ತಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೌಲಭ್ಯಗಳಿಲ್ಲ: ಸಿದ್ದರಾಮಯ್ಯ

Update: 2020-07-21 10:55 GMT

ಬೆಂಗಳೂರು, ಜು.21: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸುತ್ತಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಅಗತ್ಯಕ್ಕೆ ತಕ್ಕ ಸೌಲಭ್ಯಗಳಿಲ್ಲ. ಸರ್ಕಾರ ಕೂಡಲೇ ಆ ಕುರಿತು ಗಮನಹರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಬಳಿಕ ಸಿದ್ದರಾಮಯ್ಯ  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಿದ್ದರು.

ಏಷ್ಯಾದಲ್ಲೇ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಹೀಗಾಗಿ ಇಲ್ಲಿಯ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡಲು ಬಂದಿದ್ದೆ. ಶುಕ್ರವಾರದಿಂದ ಇಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಸೋಂಕಿನ ಲಕ್ಷಣ ಇಲ್ಲದವರನ್ನು ದಾಖಲು ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಂಥ ಸೌಲಭ್ಯದಲ್ಲಿ ಸರ್ಕಾರ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುವುದೋ ಕಾದು ನೋಡಬೇಕಿದೆ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.

ಬೆಡ್ ಕೊರತೆಯಿಂದ ಕೊರೋನ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಬೆಡ್‍ಗಳಿಗೆ ಅಲೆದಾಟ, ಚಿಕಿತ್ಸೆಗೆ ಪರದಾಟ ಎಂಬ ಸುದ್ದಿಗಳನ್ನು ನೋಡುತ್ತಿದ್ದೇವೆ. ಜುಲೈ, ಆಗಸ್ಟ್ ತಿಂಗಳಲ್ಲಿ ಸೋಂಕು ಉಲ್ಬಣಿಸಲಿದೆ ಎಂದು ತಜ್ಞರು ಮೊದಲೇ ಹೇಳಿದ್ದರು. ಲಾಕ್‍ಡೌನ್ ಅವಧಿಯಲ್ಲೇ ಇದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆಗ ಸರ್ಕಾರಕ್ಕೆ ಸಮಯ ಇರಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಈ ಕೇಂದ್ರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬೆಡ್‍ಗಳಿವೆ. 2 ಸಾವಿರಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯ ಸಿಬ್ಬಂದಿ ನೇಮಕವಾಗಬೇಕು. ಇನ್ನೂ ನೇಮಕ ಪ್ರಕ್ರಿಯೆ ನಡೆಯುತ್ತಲೇ ಇದೆ. ಶುಕ್ರವಾರದಿಂದ ಸೋಂಕಿತರ ದಾಖಲಾತಿ ಆರಂಭವಾಗುತ್ತದೆ. ವೈದ್ಯರೇ ಇಲ್ಲ ಎಂದರೆ ಹೇಗೆ ?

ಹಾಸಿಗೆ, ದಿಂಬು, ಬೆಡ್‍ಶೀಟ್ ಒದಗಿಸುವ ಗುತ್ತಿಗೆದಾರರ ಸಮಸ್ಯೆಯೇ ಇನ್ನೂ ಇತ್ಯರ್ಥವಾಗಿಲ್ಲ. 800 ರೂ. ಪ್ರಕಾರ ಬಾಡಿಗೆಗೆ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಸಾರ್ವಜನಿಕವಾಗಿ ಟೀಕೆಗಳು ಬಂದ ಬಳಿಕ ಈಗ ಸರ್ಕಾರವೇ ಖರೀದಿ ಮಾಡುತ್ತಿದೆ. ಅದೂ ಇತ್ಯರ್ಥವಾಗಿಲ್ಲ. ಬಾಡಿಗೆಯೋ, ಖರೀದಿಯೋ ಎಂಬುದು ಮೊದಲು ಇತ್ಯರ್ಥವಾಗಬೇಕು.

ಕೇಂದ್ರದಲ್ಲಿ ಶೌಚಾಲಯಗಳು ದೂರ ಇವೆ. ವಯಸ್ಸಾದವರು ಹೋಗಿ ಬರಲು ಕಷ್ಟ. ಒಳಚರಂಡಿ ವ್ಯವಸ್ಥೆ ಸಹ ಸರಿಯಾಗಿಲ್ಲ. ತಾತ್ಕಾಲಿಕ ವ್ಯವಸ್ಥೆಯೇನೋ ಮಾಡಿದ್ದಾರೆ. ವೈದ್ಯರ ಜೊತೆಗೆ ನರ್ಸ್‍ಗಳು, ಡ್ರಿ ಗ್ರೂಪ್ ನೌಕರರು ಸೇರಿದಂತೆ ಅರೆ ವೈದ್ಯಕೀಯ ಸಿಬ್ಬಂದಿ ಕೂಡಲೇ ನೇಮಕವಾಗಬೇಕು.

ಕೊರೋನ ವಿಚಾರದಲ್ಲಿ ರಾಜ್ಯ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಪ್ರತಿಪಕ್ಷಗಳು ಸಲಹೆ ನೀಡಿದರೆ ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಧಾನ ಮಂಡಲ ಅಧಿವೇಶನ ಕರೆಯುವುದಿಲ್ಲ.  ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಭ್ರಷ್ಟಾಚಾರ ನಡೆದಿದ್ದರೂ ಸುಮ್ಮನಿರಬೇಕೇ ?

ಕೊರೋನ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳಿಗೆ ನಾವು 3-4 ತಿಂಗಳು ಸಂಪೂರ್ಣವಾಗಿ ಸಹಕಾರ ನೀಡುತ್ತಾ ಬಂದೆವು. ಎಲ್ಲಿಯೂ ಮಾತನಾಡಲಿಲ್ಲ. ಹಾಗೆಂದು ಕೊರೊನಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಸುಮ್ಮನೇ ಕೂರಬೇಕಿತ್ತೇ ? ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ನಿರ್ವಹಿಸುವುದೂ ತಪ್ಪೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

 ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ ಹಾಗೂ ಬಿಬಿಎಂಪಿ ಸದಸ್ಯರಾದ ಶಿವರಾಜ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News