ಪೌರ ಕಾರ್ಮಿಕರಿಗೆ ಯಾಕೆ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಿಲ್ಲ?: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಜು.21: ಪೌರ ಕಾರ್ಮಿಕರಲ್ಲಿ ಕೊರೋನ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದರೂ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಪೌರ ಕಾರ್ಮಿಕರು ಹಾಗೂ ಕೋವಿಡ್-19 ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಸೇರಿ ಯಾವುದೇ ಸುರಕ್ಷತಾ ವಸ್ತುಗಳನ್ನು ನೀಡಿಲ್ಲ. ಬಿಬಿಎಂಪಿಯಲ್ಲಿ 17 ಸಾವಿರ ಮಂದಿ ಪೌರಕಾರ್ಮಿಕರಿದ್ದು, ಸಾಕಷ್ಟು ಮಂದಿಗೆ ಈಗಾಗಲೇ ಕೊರೋನ ದೃಢಪಟ್ಟಿದೆ ಎಂದು ಪೀಠಕ್ಕೆ ತಿಳಿಸಿದರು.
ದೀಪಾಂಜಲಿ ನಗರ ವಾರ್ಡ್ ನಲ್ಲಿ 93 ಮಂದಿಗೆ ಕೊರೋನ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 23 ಮಂದಿಗೆ ಕೊರೋನ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. ಕೊರೋನ ಸೋಂಕು ದೃಢಪಟ್ಟರೆ ಹಾಗೂ ಕೊರೋನ ಲಕ್ಷಣಗಳು ಕಂಡು ಬಂದರೆ ಹೋಂ ಕ್ವಾರಂಟೈನ್ ಆಗಿ ಎಂದು ಬಿಬಿಎಂಪಿ ಪೌರ ಕಾರ್ಮಿಕರಿಗೆ ತಿಳಿಸಿದ್ದಾರೆ. ಆದರೆ, ಈ ಎಲ್ಲ ಕಾರ್ಮಿಕರೂ ಸ್ಲಂಗಳಲ್ಲಿ ಚಿಕ್ಕ ಮನೆಗಳಲ್ಲಿ ವಾಸವಾಗಿದ್ದು, ಇವರೇನಾದರೂ ಹೋಂ ಕ್ವಾರಂಟೈನ್ ಆದರೆ ಮತ್ತಷ್ಟು ಕೊರೋನ ಹರಡುವ ಸಾಧ್ಯತೆ ಇದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪೌರ ಕಾರ್ಮಿಕರಿಗೆ ಯಾಕೆ ಇಲ್ಲಿಯವರೆಗೆ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಿಲ್ಲ ಎಂದು ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಬಿಬಿಎಂಪಿ ಪರ ವಾದಿಸಿದ ವಕೀಲರು, ಕಾರ್ಮಿಕರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇವೆ. ತಕ್ಷಣವೇ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ಸಮರ್ಪಕ ಪರಿಹಾರ ರೂಪಿಸುತ್ತೇವೆ ಎಂದು ಪೀಠಕ್ಕೆ ಭರವಸೆ ನೀಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಪೌರ ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಅವರಿಗೆ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕೆಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.