ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನು ಮುಂದೆ ಲಾಕ್‍ಡೌನ್ ಇಲ್ಲ: ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಬೆಂಗಳೂರು, ಜು. 21: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾರಕ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಪರಿಹಾರವಲ್ಲ. ಹೀಗಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸಂಜೆ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆ(ಜು.22)ಯಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲಾಕ್‍ಡೌನ್ ಇರುವುದಿಲ್ಲ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಮರಣಾಂತಿಕ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸರಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಣದಲ್ಲಿತ್ತು. ಲಾಕ್‍ಡೌನ್ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಸರಕಾರ ಟ್ರೇಸ್, ಟ್ರಾಕ್, ಟೆಸ್ಟ್, ಟ್ರೀಟ್, ಟೆಕ್ನಾಲಜಿ ಎಂಬ 5-ಟಿ ಸೂತ್ರವನ್ನು ಅಳವಡಿಸಿಕೊಂಡಿದೆ ಎಂದರು.
ರಾಜ್ಯದಲ್ಲಿ ಕೊರೋನ ಸೋಂಕಿತರು ಶೇ.90ಕ್ಕೂ ಹೆಚ್ಚು ಜನರು ಗುಣಮುಖರಾಗುತ್ತಿದ್ದಾರೆ. ಶೇ.89ರಷ್ಟು ಜನರಿಗೆ ಸೋಂಕಿನ ಲಕ್ಷಣಗಳಿಲ್ಲ. ಶೇ.5ರಷ್ಟು ಜನರಿಗೆ ಮಾತ್ರವೇ ವೆಂಟಿಲೇಟರ್ ಸೌಲಭ್ಯದ ಅಗತ್ಯವಿದೆ. ಬೆಂಗಳೂರು ನಗರದಲ್ಲೇ 11,230 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಬೇಗ ವರದಿ: ಕೊರೋನ ಸೋಂಕಿತರ ಪರೀಕ್ಷೆಯ ವರದಿ 24 ಗಂಟೆಯಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಕೊರೋನ ಸೋಂಕಿತರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಾವುದೇ ಕಾರಣಕ್ಕೂ ಯಾರೂ ಇಂತಹ ನಿರ್ಧಾರ ಕೈಗೊಳ್ಳಬಾರದು. ಕೊರೋನ ಸೋಂಕಿತರಲ್ಲಿ ಶೇ.89ರಷ್ಟು ಮಂದಿ ಚೇತರಿಕೆಯಾಗಿದ್ದಾರೆ. ಸರಕಾರ ಜನರ ಆರೋಗ್ಯದ ರಕ್ಷಣೆಗೆ ಎಲ್ಲ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಸಹಕಾರ ನೀಡಲು ಮನವಿ: ಕೊರೋನ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣ ಖರೀದಿ ಸಂಪೂರ್ಣ ಪಾರದರ್ಶಕವಾಗಿದೆ. ಒಂದು ರೂಪಾಯಿ ಅವ್ಯವಹಾರಕ್ಕೆ ಸರಕಾರ ಅವಕಾಶ ನೀಡಿಲ್ಲ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವುದೇ ದಾಖಲೆಯನ್ನು ಬೇಕಾದರೂ ಖುದ್ದು ಪರಿಶೀಲಿಸಬಹುದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರಕಾರ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಸಹಕಾರ ನೀಡಬೇಕು. ಅನಗತ್ಯ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದು ಯಡಿಯೂರಪ್ಪ ಇದೇ ವೇಳೆ ಮನವಿ ಮಾಡಿದರು.
ಬೆಂಗಳೂರು ನಗರದಲ್ಲಿ ನಾಳೆಯಿಂದ (ಜು.22) ಲಾಕ್‍ಡೌನ್ ಇರುವುದಿಲ್ಲ. ಅಲ್ಲದೆ, ರಾಜ್ಯದಲ್ಲಿ ಇತರೆ ಜಿಲ್ಲೆಗಳಲ್ಲಿಯೂ ಲಾಕ್‍ಡೌನ್ ಇರುವುದಿಲ್ಲ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಜವಾಬ್ದಾರಿ ಸರಕಾರದ ಮೇಲಿದೆ ಎಂದ ಯಡಿಯೂರಪ್ಪ, ರೋಗಿಗಳ ಸಂಚಾರಕ್ಕೆ ಆಂಬ್ಯುಲೆನ್ಸ್ ಗಳ ಕೊರತೆ ನೀಗಿಸಲು ಕ್ರಮ ವಹಿಸಲಾಗಿದೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ವ್ಯವಸ್ಥೆ ಮಾಡಲಾಗುವುದು ಎಂದರು.
ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರ, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು ಸೇರಿದಂತೆ ಇನ್ನಿತರ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಿರಿಯ ನಾಗರಿಕರು ಹಾಗೂ ಮಕ್ಕಳು ಯಾವುದೇ ಕಾರಣಕ್ಕು ಮನೆಯಿಂದ ಹೊರ ಬರಬಾರದು. ಸೋಂಕಿತರನ್ನು ಯಾರೂ ಕೀಳಾಗಿ ಕಾಣಬಾರದು ಎಂದು ಯಡಿಯೂರಪ್ಪ ಕೋರಿದರು.
ಕೊರೋನ ಸೋಂಕು ನಿಯಂತ್ರಣಕ್ಕಾಗಿ ಬೆಂಗಳೂರು ನಗರದಲ್ಲಿ ಎಂಟು ವಲಯಗಳಿಗೆ ಎಂಟು ಮಂದಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ನಾಳೆ(ಜು.22) ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸರಣಿ ಸಭೆ ನಡೆಸಲಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಾಗುವುದು'
-ಯಡಿಯೂರಪ್ಪ, ಮುಖ್ಯಮಂತ್ರಿ
ಬೆಳಗ್ಗೆಯಿಂದಲೇ ಕೆಎಸ್ಸಾರ್ಟಿಸಿ ಬಸ್ ಸಂಚಾರ
ಬೆಂಗಳೂರು ನಗರದಲ್ಲಿ ನಾಳೆಯಿಂದ ಲಾಕ್‍ಡೌನ್ ತೆರವುಗೊಳ್ಳಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 6ಗಂಟೆಯಿಂದಲೇ ರಾಜಧಾನಿಯ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಅದೇ ರೀತಿ ಲಾಕ್‍ಡೌನ್ ತೆರವಾಗಿರುವ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಎಂದಿನಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್ ಸಂಚಾರ ಆರಂಭವಾಗಲಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.