ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸದಿದ್ದರೆ ಸಿಎಂ ಮನೆಗೆ ಮುತ್ತಿಗೆ: ಡಿಕೆಶಿ ಎಚ್ಚರಿಕೆ

Update: 2020-07-21 15:11 GMT

ಬೆಂಗಳೂರು, ಜು.21: ಕಳೆದ 12 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸರಕಾರ ತಕ್ಷಣ ಸ್ಪಂದಿಸದಿದ್ದರೆ, ಅವರ ಜತೆಗೂಡಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದ ಹೊರವಲಯದ ನೆಲಮಂಗಲದಲ್ಲಿ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12 ದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದರೂ ಸರಕಾರದ ಯಾರೊಬ್ಬರೂ ಅವರ ಅಹವಾಲು ಆಲಿಸಿಲ್ಲ. ಸರಕಾರ ಈಗಲೂ ಸ್ಪಂದಿಸದಿದ್ದರೆ ಕಾಂಗ್ರೆಸ್ ಪರವಾಗಿ ನಾನು ಅವರ ಬೆಂಬಲಕ್ಕೆ ನಿಂತು ಬೆಂಗಳೂರು ಚಲೋ ಚಳವಳಿ ಮಾಡಿ, ಸಿಎಂ ಮನೆಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಈ ಹೆಣ್ಣು ಮಕ್ಕಳು ತಮ್ಮ ಜೀವವನ್ನು ಪಣಕ್ಕಿಟ್ಟು, ಎರಡೆರಡು ಬಾರಿ ಪ್ರತಿ ಮನೆಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ನೀಡಿದ್ದಾರೆ. ಇವರು ಕೂಡ ನಿಮ್ಮ ಅಕ್ಕ-ತಂಗಿಯರು ಮುಖ್ಯಮಂತ್ರಿಗಳೆ, ಕೂಡಲೇ ನಿಮ್ಮ ಸಚಿವರನ್ನು ಕರೆದು ಚರ್ಚಿಸಿ ಇವರ ಬೇಡಿಕೆ ಈಡೇರಿಸಿ ಎಂದು ಶಿವಕುಮಾರ್ ಆಗ್ರಹಿಸಿದರು.

ಕಳೆದ 12 ವರ್ಷಗಳಿಂದ ಇವರು ದುಡಿಯುತ್ತಿದ್ದು, ಅವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಎರಡೂ ಸೇರಿ 6 ಸಾವಿರ ರೂ. ಗೌರವಧನ ನಿಗದಿ ಮಾಡಿವೆ. ಎರಡೂ ಸರಕಾರಗಳು ಸೇರಿ ಒಟ್ಟಿಗೆ 12 ಸಾವಿರ ರೂ. ವೇತನ ಕೊಡಬೇಕು ಎಂದು ಇವರು ಕೇಳುತ್ತಿದ್ದಾರೆ. ಇವರ ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ಅವರು ಹೇಳಿದರು.

ನಾವೆಲ್ಲ ಒತ್ತಾಯಿಸಿದ ನಂತರ ಇವರಿಗೆ ಮೂರು ಸಾವಿರ ರೂ. ಪರಿಹಾರ ಧನ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಇವರಲ್ಲಿ ಶೇ.10 ರಷ್ಟು ಮಂದಿಗೆ ಆ ಹಣ ತಲುಪಿಲ್ಲ. ಅವರಿಗೆ 3 ಸಾವಿರ ರೂ.ಕೊಡಲು ಸರಕಾರದಿಂದ ಸಾಧ್ಯವಾಗುತ್ತಿಲ್ಲವೇ? ಈ ಸರಕಾರ ನುಡಿದಂತೆ ನಡೆಯಲು ವಿಫಲವಾಗಿದೆ ಎಂದು ಶಿವಕುಮಾರ್ ಟೀಕಿಸಿದರು.

ಸಾವಿರಾರು ಕೋಟಿ ರೂ. ಸಾಲ ಪಡೆಯುತ್ತಿದ್ದೀರಲ್ಲ, ಅದರಲ್ಲಿ ಇವರಿಗೆ ಕೊಡಬೇಕಾದ ಹಣ ಕೊಡಿ. ಇವರಿಗೂ ರಕ್ಷಣಾ ಸಲಕರಣೆ ನೀಡಿ, ಭದ್ರತೆ ನೀಡಬೇಕು. ಜತೆಗೆ ಇವರಿಗೆ ಆರೋಗ್ಯ ವಿಮೆ ಮಾಡಿಸಬೇಕು. ಮುಂದಿನ ಮೂರು ದಿನಗಳ ಒಳಗಾಗಿ ರಾಜ್ಯ ಸರಕಾರವೇ ಇವರ ಬಳಿ ಬಂದು ಮಾತನಾಡಿ ಅವರಿಗೆ ಸ್ಪಂದಿಸದಿದ್ದರೆ ಈ ಸಂಘಟನೆಯವರಿಗೆ ಬೆಂಬಲವಾಗಿ ನಿಂತು ಬೆಂಗಳೂರು ಚಲೋ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು.

ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ: ರಾಜ್ಯ ಸರಕಾರ ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರಕಾರ ಒಂದು ವಾರವಲ್ಲ, ಇನ್ನೂ ಒಂದು ತಿಂಗಳು ಲಾಕ್‍ಡೌನ್ ಮಾಡಿದರೂ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳುವುದಿಲ್ಲ ಎಂದು ಶಿವಕುಮಾರ್ ಟೀಕಿಸಿದರು.

ಗುಣಮಟ್ಟದ ಬಗ್ಗೆ ಮಾತನಾಡುವ ಸಚಿವರೇ, ಜನ ಆಸ್ಪತ್ರೆಯಲ್ಲಿ ಸೌಲಭ್ಯ ಸಿಗದೆ ಪರದಾಡುತ್ತಿದ್ದಾರೆ. ಇದೇನಾ ನಿಮ್ಮ ಕ್ವಾಲಿಟಿ(ಗುಣಮಟ್ಟ)? ಬಿಜೆಪಿಯವರು ವಿದ್ಯಾವಂತರಿರಬಹುದು. ಆದರೆ ನಮಗೆ ಪ್ರಜ್ಞಾವಂತಿಕೆ ಇದೆ. ಅವರು ಕೋವಿಡ್ ಸೋಂಕಿತರು ಬಳಸುವ ಹಾಸಿಗೆಯನ್ನು ಬಡ ಮಕ್ಕಳಿರುವ ಹಾಸ್ಟೆಲ್ ನಲ್ಲಿ ಹಾಕಿಸುತ್ತಾರಂತಲ್ಲ ಇದು ಪ್ರಜ್ಞಾವಂತಿಕೆಯೇ. ಸರಕಾರವೇ ಕೋವಿಡ್ ಸೋಂಕಿತರಿಂದ 6 ಅಡಿ ದೂರ ನಿಲ್ಲಿ ಎಂದು ಹೇಳುತ್ತಿದೆ. ಆದರೆ ಸೋಂಕಿತರು ಬಳಸಿದ ಹಾಸಿಗೆಯಲ್ಲಿ ಮಕ್ಕಳನ್ನು ಮಲಗಿಸಲು ಮುಂದಾಗಿದೆ. ಇದೆ ಏನು ಬುದ್ಧಿವಂತಿಕೆ, ಪ್ರಜ್ಞಾವಂತಿಕೆ ಎಂದು ಅವರು ಕಿಡಿಕಾರಿದರು.

ಜನರನ್ನು ರಕ್ಷಿಸಲು ಸಾಧ್ಯವಾಗದ ಈ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ. ನೀವು ಯಾವುದೇ ಅಕ್ರಮ ಮಾಡಿಲ್ಲ ಅಂತಾ ನಮಗೆ ಹೇಳುತ್ತಿದ್ದೀರಿ. ಆದರೆ ನಿಮ್ಮ ಆತ್ಮಸಾಕ್ಷಿಗೆ ನೀವೇ ಉತ್ತರ ಕೊಟ್ಟುಕೊಂಡು ನೋಡಿ ಎಂದು ಶಿವಕುಮಾರ್ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News