ದಲಿತ ಯುವಕನ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಲು ದಸಂಸ ಒತ್ತಾಯ

Update: 2020-07-21 15:19 GMT

ಬೆಂಗಳೂರು, ಜು. 21: ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಮಿನಜಗಿ ಗ್ರಾಮದ ಜಾತಿವಾದಿ ಸವರ್ಣಿಯರ ಗುಂಪಿನ ವಿರುದ್ಧ ಗೂಂಡಾ ಕಾಯ್ದೆ ಮತ್ತು ಜಾತಿನಿಂದನೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ಬಂಧಿಸಿ, ಅವರ ಆಸ್ತಿ ಮುಟ್ಟು ಹಾಕಿಕೊಳ್ಳಬೇಕು ಎಂದು ದಸಂಸ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಆಗ್ರಹಿಸಿದ್ದಾರೆ.

ಬೈಕ್ ಮುಟ್ಟಿದ ಕಾರಣಕ್ಕೆ ಜಾತಿವಾದಿಗಳ ಗುಂಪು ದಲಿತ ಯುವಕ ಕಾಶಿನಾಥ್ ತಳವಾರ ಎಂಬವರ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಮತ್ತು ಪರಿಹಾರ ನೀಡಬೇಕು. ಕ್ಷುಲ್ಲಕ ಕಾರಣಗಳಿಗಾಗಿ ದಲಿತರ ಮೇಲೆ ಪ್ರತಿನಿತ್ಯ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಕೊಲೆಯಂಥ ಪ್ರಕರಣಗಳು ಹೆಚ್ಚಾಗಿ ಆಗುತ್ತಿರುವುದು ಆತಂಕಕಾರಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿಯೂ ಜಾತಿವಾದಿಗಳಿಂದ ದಲಿತರ ಸಾಮಾಜಿಕ ಬಹಿಷ್ಕಾರ, ಮಾರಣಾಂತಿಕ ಹಲ್ಲೆ, ಜಾತಿನಿಂದನೆ ಪ್ರಕರಣಗಳು ಹೆಚ್ಚುತ್ತಿದ್ದು, ದೌರ್ಜನ್ಯ, ದಬ್ಬಾಳಿಕೆಗಳು ಮಿತಿ ಮೀರುತ್ತಿವೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿಯಲ್ಲಿ ಕ್ರಮಗಳನ್ನು ಜರುಗಿಸಬೇಕು ಮತ್ತು ಹಲ್ಲೆಗಳಿಗೆ ಎಸ್ಪಿ ಮತ್ತು ಜಿಲ್ಲಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು ಎಂದು ಮಂಜುನಾಥ್ ಅಣ್ಣಯ್ಯ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News