×
Ad

ಕಳಪೆ ವೆಂಟಿಲೇಟರ್ ಖರೀದಿ ಆರೋಪ: ಲೋಕಾಯುಕ್ತಕ್ಕೆ ದೂರು ನೀಡಿದ ಬಿಜೆಪಿ ಮಾಜಿ ಶಾಸಕ

Update: 2020-07-21 22:19 IST

ಬೆಂಗಳೂರು, ಜು.21: ಕಳಪೆ ಗುಣಮಟ್ಟದ ವೆಂಟಿಲೇಟರ್ ಆರೋಪಕ್ಕೆ ಸಿಲುಕಿರುವ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಐಎಸ್‍ಐ ಪ್ರಮಾಣ ಪತ್ರವಿಲ್ಲದ, ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್ ಖರೀದಿ ಆರೋಪ ರಾಜ್ಯ ಸರಕಾರದ ಮೇಲಿದೆ. ಈ ಸಂಬಂಧ 'ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೆರ್‍ಹೌಸಿಂಗ್ ಸೊಸೈಟಿ' ಮುಖ್ಯ ಪರಿವೀಕ್ಷಕ ಮಹೇಶ್ ಕುಮಾರ್ ಅವರಿಗೆ ಲೋಕಾಯುಕ್ತರು ಜೂನ್ 25 ರಂದು ನೋಟಿಸ್ ನೀಡಿ ಉತ್ತರ ಕೇಳಿದ್ದಾರೆ ಎಂದು ಹೇಳಲಾಗಿದೆ.

ಹೊಸದಿಲ್ಲಿ ಮೂಲದ ಕಂಪೆನಿಯಿಂದ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ವೆಂಟಿಲೇಟರ್ ಮೇಲೆ ಐಎಸ್‍ಐ, ಸಿಎ, ಎಫ್‍ಡಿಎ, ಮಾಡೆಲ್, ಉತ್ಪಾದನೆ ವರ್ಷ ಸೇರಿ ಯಾವುದೇ ವಿವರಣೆಗಳು ಇಲ್ಲ. ಈ ವೆಂಟಿಲೇಟರ್ ಗಳು 2007ರಲ್ಲಿ ಉತ್ಪಾದನೆ ಆಗಿದ್ದು, 46,583 ಗಂಟೆ ಬಳಕೆ ಮಾಡಲಾಗಿದೆ ಎಂದು ದೂರಿನಲ್ಲಿ ಅವರು ಆರೋಪ ಮಾಡಿದ್ದಾರೆಂದು ತಿಳಿದುಬಂದಿದೆ.

ಖರೀದಿಗೂ ಮುನ್ನ ಉಪಕರಣಗಳ ಗುಣಮಟ್ಟ ಪರೀಕ್ಷೆಯಲ್ಲಿ ಅಧಿಕಾರಿಗಳ ಲೋಪ ಕಂಡು ಬಂದಿದೆ. ಉತ್ಪಾದನೆ ಆಗಿ 13 ವರ್ಷ ಹಳೆಯ ಹಾಗು ಬಳಕೆ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಈ ಮೂಲಕ ವೆಂಟಿಲೇಟರ್ ಖರೀದಿಯಲ್ಲಿ ದೊಡ್ಡ ಅಕ್ರಮ ನಡೆದಿದ್ದು ತನಿಖೆ ನಡೆಸುವಂತೆ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಲೋಕಪಾಲರಿಗೆ ದೂರಿನಲ್ಲಿ ಕೋರಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News