ಬೆಂಗಳೂರಿನ ಪಾದರಾಯನಪುರದಲ್ಲಿ 10 ದಿನಗಳಿಂದ ಹೊಸ ಕೋವಿಡ್ ಪ್ರಕರಣವಿಲ್ಲ

Update: 2020-07-21 17:13 GMT

ಬೆಂಗಳೂರು, ಜು.21: ಕೋವಿಡ್-19 ಸೋಂಕು ಸಂಬಂಧ ರಾಜ್ಯದಲ್ಲೇ ಮೊದಲ ಬಾರಿಗೆ ಸೀಲ್‍ಡೌನ್ ಆಗಿ ತೀವ್ರ ಚರ್ಚೆಯಲ್ಲಿದ್ದ ಬೆಂಗಳೂರಿನ ಪಾದರಾಯನಪುರ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಿಂದ ಹೊಸ ಕೊರೋನ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿಲ್ಲ.

ಲಾಕ್‍ಡೌನ್ ಆರಂಭದ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಹಾಟ್‍ಸ್ಪಾಟ್ ಎಂದೇ ಗುರಿಯಾಗಿದ್ದ ಈ ಪಾದರಾಯನಪುರ ವಾರ್ಡಿನಲ್ಲಿ 21,578 ಜನಸಂಖ್ಯೆಯಿದ್ದು, ಎಪ್ರಿಲ್ 9ರಿಂದ ಸೀಲ್‍ಡೌನ್ ಮಾಡಲಾಗಿತ್ತು. ತದನಂತರ, ಎಪ್ರಿಲ್ 19ರಂದು ಕಂಟೈನ್‍ಮೆಂಟ್ ವಲಯ ಎಂದು ಗುರುತಿಸಲಾಗಿತ್ತು. ಇದಾದ ಬಳಿಕ ಜೂ.21ರಿಂದ ಕಂಟೈನ್‍ಮೆಂಟ್ ವಲಯದ ವ್ಯಾಪ್ತಿಯಿಂದ ಈ ವಾರ್ಡ್ ಮುಕ್ತಗೊಂಡಿದೆ. ಈ ವಾರ್ಡ್ ನಲ್ಲಿ ಪ್ರಕರಣಗಳ ಗಣನೀಯವಾಗಿ ಇಳಿಮುಖವಾಗಿದೆ. 10 ದಿನಗಳಿಂದ ಇಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ವರದಿಯಾಗಿಲ್ಲ. ಅಷ್ಟೇ ಅಲ್ಲದೆ, ಪಾದರಾಯನಪುರ ವಾರ್ಡ್ ನಲ್ಲಿ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ಸ್ಥಳೀಯ ಆರೋಗ್ಯಾಧಿಕಾರಿಗಳು.

ರಾಜ್ಯದಲ್ಲಿ ಮೊದಲು ಸೀಲ್‍ಡೌನ್ ಆಗಿದ್ದ ವಾರ್ಡ್ ಪಾದರಾಯನಪುರ. ಇಲ್ಲಿನ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರಿಗೂ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆದು ಅವರು ಗುಣಮುಖರಾದರು. ಇಡೀ ವಾರ್ಡ್ ಅನ್ನು ಕಂಟೈನ್‍ಮೆಂಟ್ ಪ್ರದೇಶ ಎಂದು ಘೋಷಿಸಿ ಬಿಬಿಎಂಪಿ ನಿರ್ವಹಣೆ ಮಾಡಿತ್ತು.

ಎಷ್ಟು ಪ್ರಕರಣ?: ಒಟ್ಟು 90 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಶೇ.98ರಷ್ಟು ಮಂದಿ ಗುಣಮುಖರಾಗಿದ್ದಾರೆ. ವಾರಕ್ಕೆ ಒಂದು ಅಥವಾ ಎರಡು ಪ್ರಕರಣ ವರದಿಯಾಗುತ್ತಿತ್ತು. ಕಳೆದ ವಾರದಿಂದ ಅದೂ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದರು.

'ಅಪಪ್ರಚಾರ ಮಾಡಿದರು'

ಆರಂಭ ದಿನಗಳಲ್ಲಿ ಪಾದರಾಯನಪುರ ವಾರ್ಡ್ ಅನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡಿದರು. ಇದರ ಪರಿಣಾಮ ಸ್ಥಳೀಯರ ದಿನಗೂಲಿ ಕಾರ್ಮಿಕರು ಸೇರಿದಂತೆ ತೊಂದರೆ ಎದುರಿಸಿದರು. ಇದೀಗ ಬೆಂಗಳೂರಿನಲ್ಲಿ ಈಗ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳಿಗೆ ಯಾರನ್ನು ದೂರುತ್ತಾರೆ. ಸಾಂಕ್ರಾಮಿಕ ರೋಗದ ವಿಷಯದಲ್ಲಿ ಒಂದು ಸಮುದಾಯವನ್ನು ಯಾರೊಬ್ಬರೂ ಗುರಿ ಮಾಡಬಾರದು.

-ಮುಹಮ್ಮದ್ ಶಫಿ, ಪಾದರಾಯನಪುರ ನಿವಾಸಿ

ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕಿಯರು, ವೈದ್ಯರು ಹಾಗೂ ಅಧಿಕಾರಿಗಳೆಲ್ಲರ ಶ್ರಮದಿಂದಾಗಿ ಈ ವಾರ್ಡ್ ನಲ್ಲಿ ಸೋಂಕು ನಿಯಂತ್ರಣ ಸಾಧ್ಯವಾಗಿದೆ. ಅವರೆಲ್ಲ ಧೃತಿಗೆಡದೇ ಕಾರ್ಯನಿರ್ವಹಿಸಿದ್ದಾರೆ. ಕಳೆದ 10 ದಿನಗಳಿಂದ ಪಾದರಾಯನಪುರ ವಾರ್ಡ್ ನಲ್ಲಿ ಕೋವಿಡ್ ಪ್ರಕರಣ ವರದಿಯಾಗಿಲ್ಲ. ಅಲ್ಲಿನ ಜನರು ಸುರಕ್ಷಿತವಾಗಿದ್ದಾರೆ.

-ಡಾ.ಮನೋರಂಜನ್ ಹೆಗ್ಡೆ, ಆರೋಗ್ಯಾಧಿಕಾರಿ, ಬಿಬಿಎಂಪಿ ದಕ್ಷಿಣ ವಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News