ನಾಳೆಯಿಂದ ವಲಯವಾರು ಕೋವಿಡ್-19 ಸಭೆ ಆರಂಭ: ಸಚಿವ ವಿ.ಸೋಮಣ್ಣ

Update: 2020-07-21 18:07 GMT

ಬೆಂಗಳೂರು, ಜು. 21: ಕೋವಿಡ್-19 ನಿಯಂತ್ರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶ ಮೇರೆಗೆ ನಾಳೆಯಿಂದ ವಲಯವಾರು ಕೋವಿಡ್-19 ಸಭೆ ಆರಂಭ ಮಾಡುತ್ತೇವೆ. ಇದರಲ್ಲಿ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಜಂಟಿ ಆಯುಕ್ತರ ಜೊತೆಯಲ್ಲಿ ಸೋಂಕು ನಿಯಂತ್ರಣ ಮಾಡುವ ಕುರಿತು ಚರ್ಚಿಸಲಾಗುವುದು ಎಂದು  ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಣಾಮವಾಗಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವ ವಲಯದ ವ್ಯಾಪ್ತಿಯ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ  ಮಾಡಿ ಅವರು ಮಾತನಾಡುತ್ತಿದ್ದರು.

ಬೌರಿಂಗ್ ಆಸ್ಪತ್ರೆಯು ಒಟ್ಟು 650ಕ್ಕೂ ಹೆಚ್ಚು ಬೆಡ್‍ಗಳನ್ನು ಹೊಂದಿದ್ದು, 250 ಬೆಡ್‍ಗಳನ್ನು ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟಿದ್ದಾರೆ. ಈ 250 ಬೆಡ್‍ಗಳಲ್ಲಿ 150 ಆಕ್ಸಿಜನ್ ಸಹಿತ ಬೆಡ್‍ಗಳು ಸೇರಿವೆ ಎಂದ ಅವರು, ಶಿವಾಜಿನಗರ, ಶಾಂತಿನಗರ, ಪುಲಿಕೇಶಿನಗರ ಮತ್ತು ಸರ್ವಜ್ಞನಗರಗಳು ಹೆಚ್ಚು ಜನನಿಬಿಡ ಪ್ರದೇಶದಗಳಾಗಿದ್ದು,  ಈ ನಾಲ್ಕು ಕ್ಷೇತ್ರಗಳ ಕೋವಿಡ್ ಕೇರ್ ಕೇಂದ್ರಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ ಎಂದರು.

ಶಿವಾಜಿನಗರದ ಬ್ರಾಡ್ ವೇ ಆಸ್ಪತ್ರೆಯು ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ಇನ್ಫೋಸಿಸ್ ಸಹಾಯದೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ ನಿರ್ಮಾಣವಾಗಿದೆ. ಮುಂದಿನ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಈ ಆಸ್ಪತ್ರೆಯು ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ. ಕೋವಿಡ್-19ಕ್ಕೆ ಸಂಬಂದಿಸಿದಂತೆ 150 ಆಕ್ಸಿಜನ್ ಮತ್ತು 35 ಐಸಿಯು ಬೆಡ್‍ಗಳು ಬ್ರಾಡ್ ವೇ ಆಸ್ಪತ್ರೆಯು ಹೊಂದಿದೆ ಎಂದರು. 

ನಂತರ ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಸೆಂಟರನ್ನು ಸಚಿವರು ಉದ್ಘಾಟಿಸಿದರು. ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಡಾ.ಮನೋಜ್‍ಕುಮಾರ್, ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರು ಪಿ.ಸಿ.ಮೋಹನ್ ಮತ್ತು ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News