ತುಟ್ಟಿ ಭತ್ತೆ ಪಾವತಿ ಮುಂದೂಡುವ ಕ್ರಮ ಹಿಂಪಡೆಯಲಿ: ಎಐಟಿಯುಸಿ, ಸಿಪಿಎಂ ಒತ್ತಾಯ

Update: 2020-07-21 18:10 GMT

ಬೆಂಗಳೂರು, ಜು.21: ರಾಜ್ಯ ಸರಕಾರ ಕನಿಷ್ಟ ಕೂಲಿ ಹಾಗೂ ತುಟ್ಟಿ ಭತ್ತೆ ಪಾವತಿ ಮುಂದೂಡುತ್ತಿರುವ ಕ್ರಮವನ್ನು ಹಿಂಪಡೆದು, ಬಡ ಕಾರ್ಮಿಕರಿಗೆ ಆಗುವ ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ತಪ್ಪಿಸಬೇಕೆಂದು ಆಲ್ ಇಂಡಿಯ ಟ್ರೇಡ್ ಯೂನಿಯನ್ ಹಾಗೂ ಸಿಪಿಎಂ ಒತ್ತಾಯಿಸಿದೆ.

ರಾಜ್ಯ ಸರಕಾರ ಜು.20ರಂದು ಅಧಿಸೂಚನೆ ಹೊರಡಿಸಿ ವ್ಯತ್ಯಸ್ಥ ತುಟ್ಟಿ ಭತ್ತೆ ಪಾವತಿಯನ್ನು ಒಂದು ವರ್ಷದವರೆಗೆ ಮುಂದೂಡಿದೆ. ಈ ಕ್ರಮದಿಂದಾಗಿ ಕೇವಲ 11 ಸಾವಿರ ರೂ. ಅಲ್ಪ ವರಮಾನವಿರುವ ಬಡ ಕಾರ್ಮಿಕರನ್ನು ಹಾಗೂ ಅವರ ಕುಟುಂಬಗಳನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡುತ್ತವೆ. ಈ ಬಗ್ಗೆ ಹೈಕೋರ್ಟ್ ಎಪ್ರಿಲ್ 10ರಂದು ನೀಡಿದ ಆದೇಶದಲ್ಲಿ ತುಟ್ಟಿ ಭತ್ತೆಯು ಕನಿಷ್ಠ ಕೂಲಿಯ ಅವಿಭಾಜ್ಯ ಅಂಗವೆಂದು ಎತ್ತಿ ಹಿಡಿದಿದೆ.

ಕೋವಿಡ್-19ರ ಪರಿಣಾಮವಾಗಿ ಲಕ್ಷಾಂತರ ಜನ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಉದ್ಯೋಗ ನಾಶಕ್ಕೆ ಕಾರಣವಾದ ನಿಗದಿತ ಅವಧಿ ಕೆಲಸ ಹಾಗೂ ಬಡಜನರ ವರಮಾನ ನಾಶಕ್ಕೆ ಕಾರಣವಾಗುವ ತುಟ್ಟಿ ಭತ್ತೆ ಮುಂದೂಡುವ ವಿನಾಶಕಾರಿ ನೀತಿಗಳ ಜಾರಿ ಮಾಡುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ.

ಬಡ ಕಾರ್ಮಿಕರ ವೇತನವನ್ನು ಲೂಟಿ ಮಾಡಿ ಕೈಗಾರಿಕೆಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯತ್ನಿಸುತ್ತಿರುವುದು ಲಜ್ಜೆಗೇಡಿತನದ ಪರಮಾವಧಿಯಾಗಿದೆ. ಈ ಕಾರ್ಮಿಕ ವಿರೋಧಿ ಕ್ರಮಗಳನ್ನು ಹಿಂಪಡೆಯದಿದ್ದರೆ ಎಐಟಿಯುಸಿ, ಸಿಪಿಎಂ ವತಿಯಿಂದ ಕಾನೂನು ಹಾಗೂ ಬೀದಿ ಹೋರಾಟಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರಕಟನೆಯ ಮೂಲಕ ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News