ಶುಐಬ್ -ಸಾನಿಯಾ ಭೇಟಿ ವಿಳಂಬ

Update: 2020-07-22 04:54 GMT

ಕರಾಚಿ, ಜು.21: ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಶುಐಬ್ ಮಲಿಕ್ ಅವರಿಗೆ ಪತ್ನಿ, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಭೇಟಿಯು ಅಂತರ್‌ರಾಷ್ಟ್ರೀಯ ವಿಮಾನಯಾನ ನಿಷೇಧದಿಂದಾಗಿ ಮತ್ತಷ್ಟು ವಿಳಂಬವಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಲಿಕ್ ಅವರಿಗೆ ಕುಟುಂಬದೊಂದಿಗೆ ಇರಲು ತರಬೇತಿಗೆ ನಾಲ್ಕು ವಾರಗಳ ರಜೆಯನ್ನು ನೀಡಿದ ಹಿನ್ನೆಲೆಯಲ್ಲಿ ದಂಪತಿ ಜುಲೈನಲ್ಲಿ ಭೇಟಿಯಾಗಲು ಸಿದ್ಧರಾಗಿದ್ದರು.

ಆದಾಗ್ಯೂ ಕೊರೋನ ವೈರಸ್ ಲಾಕ್‌ಡೌನ್ ಮತ್ತು ಇತರ ನಿರ್ಬಂಧಗಳು ಅವರ ಭೇಟಿಗೆ ತಡೆಯಾಗಿದೆ. ಈಗಿರುವ ಪ್ರಯಾಣ ನಿಷೇಧವನ್ನು ತೆಗೆದುಹಾಕಿದರೆ ಮಾತ್ರ ಮಲಿಕ್ ಅವರಿಗೆ ಭಾರತಕ್ಕೆ ಬರಲು ಸಾಧ್ಯವಾಗುತ್ತದೆ. ಪಾಕಿಸ್ತಾನ ತಂಡ ಕಳೆದ ತಿಂಗಳು ಇಂಗ್ಲೆಂಡ್‌ಗೆ ತೆರಳಿದ್ದು, ಇಂಗ್ಲೆಂಡ್ ವಿರುದ್ಧ ಮುಂಬರುವ ಸರಣಿಗೆ ಸಿದ್ಧತೆಗಳನ್ನು ಪ್ರಾರಂಭಿಸಿತ್ತು.

ಶುಐಬ್ ಅವರಿಗೆ ಜುಲೈ 24 ರವರೆಗೆ ಸಮಯ ನೀಡಲಾಗಿತ್ತು. ಆದರೆ ಭಾರತವು ಜುಲೈ 31ರವರೆಗೆ ಅಂತರ್‌ರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ವಿಸ್ತರಿಸಿದ ನಂತರ ಆಗಸ್ಟ್ ಎರಡನೇ ವಾರದವರೆಗೆ ಭಾರತಕ್ಕೆ ತೆರಳಲು ಶುಐಬ್‌ಗೆ ಅವಕಾಶವನ್ನು ವಿಸ್ತರಿಸಲಾಗಿತ್ತು. ಭಾರತದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈಗಿರುವ ಪರಿಸ್ಥಿತಿಯಲ್ಲಿ ಸಾನಿಯಾ ಮತ್ತು ಮಲಿಕ್ ಆರು ತಿಂಗಳಿಗಿಂತ ಹೆಚ್ಚು ಕಾಲ ದೂರ ಉಳಿದಿದ್ದಾರೆ.

ಮೇ ತಿಂಗಳಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಶುಐಬ್ ಮತ್ತೆ ಯಾವಾಗ ಭೇಟಿಯಾಗುತ್ತಾರೆಂದು ತನಗೆ ತಿಳಿದಿಲ್ಲ ಎಂದು ಸಾನಿಯಾ ಹೇಳಿದ್ದರು.

‘‘ಅವರು ಪಾಕಿಸ್ತಾನದಲ್ಲಿ ಸಿಲುಕಿಕೊಂಡರು, ನಾನು ಇಲ್ಲಿ ಸಿಲುಕಿಕೊಂಡೆ. ನಮಗೆ ಸಣ್ಣ ಮಗು ಇರುವುದರಿಂದ ಅದನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗಿದೆ. ಮಗ ಇಝ್ಹಾನ್‌ಗೆ ತಂದೆಯನ್ನು ಮತ್ತೆ ಯಾವಾಗ ನೋಡಲು ಸಾಧ್ಯವಾಗುತ್ತದೆ ಎಂಬುದು ನಮಗೆ ತಿಳಿದಿಲ್ಲ.’’ ಎಂದು ಬೇಸರ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News