ಸೋಂಕಿನ ವಿರುದ್ಧದ ಹೋರಾಟದಲ್ಲಿ ಇಬ್ನ್ ಸೀನ ಮಾದರಿ

Update: 2020-07-22 13:07 GMT
Photo source: yenisafak.com

ಪಾಶ್ಚಿಮಾತ್ಯರಲ್ಲಿ ಅವಿಸೆನ್ನ ಎಂದೇ ಖ್ಯಾತರಾಗಿರುವ ಇಬ್ನ್ ಸೀನ 9ನೇ ಶತಮಾನದಲ್ಲಿ ಉಜ್ಬೇಕಿಸ್ತಾನದಲ್ಲಿ ಹುಟ್ಟಿದ ಒಬ್ಬ ಪ್ರಮುಖ ಮುಸ್ಲಿಂ ವಿದ್ವಾಂಸ, ಚಿಂತಕ, ವೈದ್ಯಕೀಯ ಹಾಗು ಖಗೋಳ ಶಸ್ತ್ರ ತಜ್ಞ. ಹಲವು ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಸಂಪಾದಿಸಿದ್ದ ಪ್ರಖರ ಮೇಧಾವಿಯಾಗಿದ್ದರು ಇಬ್ನ್ ಸೀನ. ಸಾವಿರ ವರ್ಷಗಳ ಮೊದಲೇ ಮಾರಕ ಸಾಂಕ್ರಾಮಿಕಗಳಿಂದ ಜನರನ್ನು ರಕ್ಷಿಸಲು ಕ್ವಾರಂಟೈನ್ , ಐಸೋಲೇಷನ್ ಕ್ರಮಗಳನ್ನು ತೋರಿಸಿಕೊಟ್ಟಿದ್ದ ತಜ್ಞ ಇಬ್ನ್ ಸೀನ. ಇದರಿಂದ ಜನರಿಂದ ಜನರಿಗೆ ಸೋಂಕು ಹರಡುವುದನ್ನು ನಿಲ್ಲಿಸಬಹುದು ಎಂದು ಅವರು ಹೇಳಿಕೊಟ್ಟಿದ್ದರು.  

ಇಂದು ಆಧುನಿಕ ವೈದ್ಯಕೀಯ ಜಗತ್ತು ಅದೇ ವಿಧಾನವನ್ನು ಕೊರೋನ ನಿಗ್ರಹಿಸಲು ಅನುಸರಿಸುತ್ತಿರುವುದು ಗಮನಾರ್ಹ. ವಿಶ್ವ ಅರೋಗ್ಯ ಸಂಸ್ಥೆ ಕೊರೋನವನ್ನು ನಿಗ್ರಹಿಸಲು ಮೊದಲು ಸೂಚಿಸಿದ್ದೇ ಈ ಕ್ವಾರಂಟೈನ್ ಮಾರ್ಗ.

ಇಬ್ನ್ ಸೀನ ಐದು ಸಂಪುಟಗಳ ವೈದ್ಯಕೀಯ ವಿಶ್ವಕೋಶವೊಂದನ್ನು ರಚಿಸಿದ್ದರು. Al-Qanun fi't-Tibb ಎಂಬ ಹೆಸರಿನ ಆ ಗ್ರಂಥ ಇಂಗ್ಲೀಷ್ ನಲ್ಲಿ  The Canon of Medicine ಎಂದು ಖ್ಯಾತವಾಗಿದೆ. 18ನೇ ಶತಮಾನದವರೆಗೂ ಇಸ್ಲಾಮಿಕ್ ದೇಶಗಳು ಹಾಗು ಯುರೋಪ್ ಇದೇ ಗ್ರಂಥವನ್ನು ಮೂಲ ವೈದ್ಯಕೀಯ ಆಕರವಾಗಿ ಬಳಸುತ್ತಿದ್ದರು. ಇಂದಿಗೂ ಯುನಾನಿ ವೈದ್ಯಕೀಯ ಪದ್ಧತಿಯಲ್ಲಿ ಈ ಗ್ರಂಥ ಪ್ರಮುಖ ಆಕರವಾಗಿದೆ. ಆ ಗ್ರಂಥದಲ್ಲಿ ಮಾರಕ ಸಾಂಕ್ರಾಮಿಕಗಳ ಸೋಂಕು ಹರಡದಂತೆ ತಡೆಯಲು 40 ದಿನಗಳ ಕ್ವಾರಂಟೈನ್ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದರು.  

ಇಬ್ನ್ ಸೀನ ಅವರನ್ನು ಇಂದಿಗೂ ಅರಬರ ಅರಿಸ್ಟಾಟಲ್ ಎಂದು ಗುರುತಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅವರು ನೀಡಿರುವ ಕೊಡುಗೆ ಹಾಗು ಅವರ ದೂರದೃಷ್ಟಿಯ ಅನ್ವೇಷಣೆಗಳಿಗಾಗಿ ಇಂದಿಗೂ ಅವರನ್ನು ಗೌರವಿಸಲಾಗುತ್ತದೆ.  

ಇಬ್ನ್ ಸೀನ ಅವರು ವಿವಿಧ ಕ್ಷೇತ್ರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದವರಾಗಿದ್ದರು. ಒಂದು ಅಂದಾಜಿನ ಪ್ರಕಾರ ಅವರು ಸುಮಾರು 450 ಕೃತಿಗಳನ್ನು ರಚಿಸಿದ್ದು ಈ ಪೈಕಿ 240 ಮಾತ್ರ ಮುಂದಿನ ಪೀಳಿಗೆಗಳಿಗೆ ಸಿಕ್ಕಿದೆ. ಇದರಲ್ಲಿ ಕನಿಷ್ಠ 40 ಕೃತಿಗಳು ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದವುಗಳು ಎಂದು ಹೇಳಲಾಗಿದೆ. ‘The Canon of Medicine’ ಬಳಿಕ ಅವರ ಇನ್ನೊಂದು ಮಹತ್ವದ ಕೃತಿ ‘The Book of Healing’ ವಿಜ್ಞಾನ, ಧರ್ಮ ಹಾಗು ತತ್ವಜ್ಞಾನಗಳ ಕುರಿತು ವ್ಯಕ್ತಿಯೊಬ್ಬ ಬರೆದ ಅತಿದೊಡ್ಡ ವಿಶ್ವಕೋಶ ಎಂದು ಮನ್ನಣೆ ಗಳಿಸಿದೆ. 

ಸೂಕ್ಶ್ಮಾಣುಗಳಿಂದ ರೋಗ ಹರಡುತ್ತದೆ ಎಂದು ಮೊದಲು ಹೇಳಿದ್ದು ಇಬ್ನ್ ಸೀನ. ಕಾಮಾಲೆ ಕಾಯಿಲೆ ಹೇಗೆ ಬರುತ್ತದೆ ಎಂದೂ ಅವರು ತಿಳಿಸಿಕೊಟ್ಟಿದ್ದರು. ಕೆಲವು ರೋಗಗಳ ಚಿಕಿತ್ಸೆಗೆ ನಿದ್ರಾಜನಕಗಳನ್ನು ನೀಡುವುದನ್ನು ಅವರು ಆಗಲೇ ಅನುಸರಿಸಿದ್ದರು. ಮೂತ್ರದ ಮೂಲಕ ಮಧುಮೇಹ ಕಂಡು ಹಿಡಿಯುವುದನ್ನು ಅವರೇ ಮೊದಲು ತೋರಿಸಿ ಕೊಟ್ಟಿದ್ದು ಎಂದು ಹೇಳಲಾಗಿದೆ. ಇಬ್ನ್ ಸೀನ ಎಂದೂ ತಮ್ಮ ವೈದ್ಯಕೀಯ ಸೇವೆ ಹಾಗು ಅನ್ವೇಷಣೆಗಳಿಗೆ ಯಾವುದೇ ಆರ್ಥಿಕ ಲಾಭ ಪಡೆಯುತ್ತಿರಲಿಲ್ಲ.  

ಉಜ್ಬೇಕಿಸ್ತಾನದ ಶ್ರೀಮಂತ ಕುಟುಂಬದಲ್ಲಿ 980 ನೇ ಇಸವಿಯಲ್ಲಿ  ಹುಟ್ಟಿದ ಇಬ್ನ್ ಸೀನ ಬಾಲ್ಯದಲ್ಲೇ ತಮ್ಮ ಅಪಾರ ಜ್ಞಾಪಕ ಶಕ್ತಿ ಹಾಗು ಬುದ್ಧಿಮತ್ತೆಗೆ ಖ್ಯಾತಿ ಪಡೆದಿದ್ದರು. ಅವರ ತಂದೆ ಆ ಪ್ರಾಂತ್ಯದ ರಾಜ್ಯಪಾಲರಾಗಿದ್ದು ಅವರೂ ದೊಡ್ಡ ವಿದ್ವಾಂಸರಾಗಿದ್ದರು. ಹಾಗಾಗಿ ಇಬ್ನ್ ಸೀನ ಅವರಿಗೆ ವಿಜ್ಞಾನ, ಧರ್ಮ ಹಾಗು ತತ್ವಜ್ಞಾನಗಳಲ್ಲಿ ಅತ್ಯುತ್ತಮ ಶಿಕ್ಷಣ ಹಾಗು ತರಬೇತಿ ಸಿಕ್ಕಿತ್ತು.

ಹತ್ತನೇ ವರ್ಷದಲ್ಲಿ ಕುರ್ ಆನ್ ಕಂಠಪಾಠ ಮಾಡಿದ ಇಬ್ನ್ ಸೀನ ಬಳಿಕ ಅರಿಸ್ಟಾಟಲ್ ಅವರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಗಣಿತದಲ್ಲೂ ಬಹಳ ಬುದ್ಧಿವಂತರಾಗಿದ್ದ ಇಬ್ನ್ ಸೀನ , ಅರಿಸ್ಟಾಟಲ್ ರ ಅಣುವಿನ ಸಂಶೋಧನೆಯನ್ನು ಒಪ್ಪಿದರೂ ಅದರಲ್ಲಿ ಒಂದು ಲೋಪವಿದೆ ಎಂದು ಹೇಳಿದರು. ಒಂದು ಅಣು ಸ್ಥಿರ ಅಲ್ಲ, ಅದು ಹಲವಾರು ಉಪ ಅಣುಗಳಾಗಿ ಕೊನೆಗೆ ಅಸ್ತಿತ್ವವೇ ಇಲ್ಲದಷ್ಟು ವಿಭಜನೆಯಾಗುತ್ತದೆ ಎಂದು ಇಬ್ನ್ ಸೀನ ಹೇಳಿದರು.    

16ನೇ ವರ್ಷಕ್ಕೆ ವೈದ್ಯಕೀಯ ಶಾಸ್ತ್ರ ಕಲಿಯಲು ಪ್ರಾರಂಭಿಸಿದ ಇಬ್ನ್ ಸೀನ ಎರಡು ವರ್ಷಗಳಲ್ಲಿ ಅದನ್ನು ಕಲಿತರು. ಆ ಬಳಿಕ ವೈದ್ಯಕೀಯ ವಿಜ್ಞಾನದಲ್ಲಿ ನಿರಂತರ ಜ್ಞಾನಾರ್ಜನೆ ಮಾಡಿದ ಅವರು ಸೂಕ್ಷ್ಮಾಣುಗಳಿಂದ ರೋಗ ಹರಡುತ್ತದೆ ಎಂಬ ತೀರ್ಮಾನಕ್ಕೆ ಬಂದರು. ಇದೇ ಸಾವಿರ ವರ್ಷಗಳ ಬಳಿಕ ಲೂಯಿ ಪ್ಯಾಶ್ಚರ್ ಅವರ ಸೂಕ್ಶ್ಮಾಣು ಸಿದ್ಧಾಂತದ ಮೂಲವಾಯಿತು.

ಇಬ್ನ್ ಸೀನ ಅವರ ‘The Canon of Medicine’ ಮುಂದೆ ಹಲವು ವಿಜ್ಞಾನಿಗಳು ಹಾಗು ವೈದ್ಯಕೀಯ ತಜ್ಞರಿಗೆ ದಾರಿದೀಪವಾಯಿತು. ಇಬ್ನ್ ಸೀನ ಅವರ ಆ ಮಹತ್ವದ ಕೃತಿ ಆಧರಿಸಿ ವಿಜ್ಞಾನಿಗಳು ಮಾಡಿದ ಸಂಶೋಧನೆ ಆಧುನಿಕ ವಿಜ್ಞಾನಿಗಳಿಗೂ ಮಾದರಿಯಾಗಿ ಬಳಕೆಯಾಗಿದೆ.  

ಜಗದ್ವಿಖ್ಯಾತ ಇಟಾಲಿಯನ್ ಕವಿ ಡಾಂಟೆ ಇಬ್ನ್ ಸೀನ ಅವರ ಹೆಸರನ್ನು ತನ್ನ ನಾಟಕ ‘La Divina Commedia’ ದಲ್ಲಿ ಉಲ್ಲೇಖಿಸಿದ್ದಾರೆ. ಇಂದಿಗೂ ಜಗತ್ತಿನ ಹಲವೆಡೆ ಆಸ್ಪತ್ರೆಗಳಲ್ಲಿ ಇಬ್ನ್ ಸೀನ ಅವರ ಚಿತ್ರಗಳನ್ನು ಗೌರವ ಪೂರ್ವಕವಾಗಿ  ಇಟ್ಟಿರುವುದನ್ನು ಕಾಣಬಹುದು. ಚಂದ್ರನ ಮೇಲಿನ ಕುಳಿಯೊಂದಕ್ಕೂ ಇಬ್ನ್ ಸೀನ ಅವರ ಹೆಸರಿಡಲಾಗಿದ್ದು ಹಲವು ದೇಶಗಳು ಅವರ ಸ್ಮರಣಾರ್ಥ ನೋಟುಗಳು, ನಾಣ್ಯಗಳು ಹಾಗು ಅಂಚೆ ಚೀಟಿಗಳನ್ನು ತಂದಿವೆ.

ಇಬ್ನ್ ಸೀನ ಅವರ ಕುರಿತ ಮಾಹಿತಿಯ ವಿಡೀಯೊ ಇಲ್ಲಿದೆ:

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News