×
Ad

ಬಿಬಿಎಂಪಿಯಿಂದ 291 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

Update: 2020-07-23 17:12 IST

ಬೆಂಗಳೂರು, ಜು.23: ಕೊರೋನ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆ ಮೀಸಲಿಡಬೇಕು ಎಂದು ಬಿಬಿಎಂಪಿ ಆದೇಶಿಸಿದ್ದರೂ, ಈ ಆದೇಶಕ್ಕೆ ಮನ್ನಣೆ ನೀಡದ ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಶೋಕಾಸ್ ನೋಟಿಸ್ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 291 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕ್ತರು ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಈ ನೋಟಿಸ್ ತಲುಪಿದ 24 ಗಂಟೆಯೊಳಗೆ ಶೇ.50 ರಷ್ಟು ಹಾಸಿಗೆಗಳನ್ನು ಕಡ್ಡಾಯವಾಗಿ ಕೊರೋನ ಸೋಂಕಿತರಿಗೆ ಮೀಸಲಿಡಬೇಕು ಹಾಗೂ ಅಗತ್ಯ ಔಷಧೋಪಚಾರ ನೀಡಬೇಕು ಎಂದು ಸೂಚಿಸಿದ್ದಾರೆ.

ಅಲ್ಲದೇ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಪ್ರಾಧಿಕಾರದವರು ಶಿಫಾರಸು ಮಾಡುವ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಬೇಕು ಹಾಗೂ ನಿಗದಿಪಡಿಸಿದ ಶುಲ್ಕ ಪಡೆಯಬೇಕು. ಸಂಬಂಧಪಟ್ಟ ಇಲಾಖೆ ಸೂಚಿಸಿದ ಕೊರೋನ ಸೋಂಕಿತರಿಗೆ ಜನರಲ್ ಹಾಸಿಗೆ, ಐಸಿಯು, ವೆಂಟಿಲೇಟರ್ ಮತ್ತಿತರ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಲಾಗಿದೆ.

ಬಿಬಿಎಂಪಿ ಸೂಚಿಸುವ ಸೋಂಕಿತರನ್ನು ಸಂಬಂಧಪಟ್ಟ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುವಂತೆ ನೋಡಿಕೊಳ್ಳಲು ಹಿರಿಯ ಸರಕಾರಿ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಲಾಗಿದ್ದು, ಈ ಅಧಿಕಾರಿ ಎಲ್ಲ ಆಸ್ಪತ್ರೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೋನ ಸೋಂಕಿತರು ಹಾಗೂ ಬಾಕಿ ಉಳಿದಿರುವ ನಿಗದಿತ ಹಾಸಿಗೆಗಳ ವಿವರವನ್ನು ಆಸ್ಪತ್ರೆ ಮುಂಭಾಗದ ಫಲಕದಲ್ಲಿ ನಮೂದಿಸಲೇಬೇಕಾಗಿದೆ. ಇಲ್ಲದಿದ್ದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News