×
Ad

ಒಂದು ರೂ. ಭ್ರಷ್ಟಾಚಾರ ಮಾಡಿದ್ದರೂ ಬಹಿರಂಗವಾಗಿ ನೇಣಿಗೆ ಹಾಕಿ: ಸಚಿವ ಡಾ.ಸುಧಾಕರ್

Update: 2020-07-23 21:01 IST

ಬೆಂಗಳೂರು, ಜು.22: ಕೋವಿಡ್-19 ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸಾವಿರಾರು ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂದು ಆರೋಗ್ಯದ ತುರ್ತು ಪರಿಸ್ಥಿತಿಯ ಈ ಹಂತದಲ್ಲಿ ಆಧಾರ ರಹಿತವಾಗಿ, ಆರೋಪಿಸುವ ಮೂಲಕ ಕಾಂಗ್ರೆಸ್ ನಾಯಕರು ಐತಿಹಾಸಿಕ ಪ್ರಮಾದ ಮಾಡಿದ್ದು, ರಾಜ್ಯ ಜನತೆಯೇ ಅವರನ್ನು ಶಿಕ್ಷಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನದಿಂದ ಸಂಭವಿಸುತ್ತಿರುವ ಸಾವು, ನೋವನ್ನು ತಪ್ಪಿಸುವ ಬಗ್ಗೆ ಪ್ರಾಮಾಣಿಕವಾಗಿ ನಾವು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ದೋಷಾರೋಪಣೆಗಳನ್ನು ಮಾಡುವುದನ್ನು ಯಾರು ಒಪ್ಪುವುದಿಲ್ಲ ಎಂದರು.

ಅವರ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು, ನಮ್ಮ ತಟ್ಟೆಯಲ್ಲಿ ನೊಣ ಹುಡುಕಲು ಬಂದಿದ್ದಾರೆ. ಅವರಿಗೇನಾದರೂ ಗೌರವ ಇದೆಯೇ, ಭ್ರಷ್ಟಾಚಾರದ ಕೂಪವನ್ನೆ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ನಮ್ಮ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು. ಒಂದೇ ಒಂದು ಅಂಕಿ ಸಂಖ್ಯೆಯನ್ನು ಅವರು ಸರಿಯಾಗಿ ನೀಡಿಲ್ಲ ಎಂದು ಸುಧಾಕರ್ ದೂರಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ರೂ. ಖರೀದಿಯಾಗಿದೆ ಎಂದು ಆರೋಪಿಸಿದ್ದಾರೆ. ಯಾವ ರೀತಿ ಇವರು ವಿರೋಧ ಪಕ್ಷದ ನಾಯಕ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 13 ಬಜೆಟ್‍ಗಳನ್ನು ಮಂಡಿಸಿರುವ ಇವರಿಗೆ ಪ್ರಸ್ತಾವನೆ, ಅನುಮೋದನೆ, ಖರ್ಚು ಇದರ ನಡುವಿನ ವ್ಯತ್ಯಾಸಗೊತ್ತಿಲ್ಲವೆ ಎಂದು ಸಿದ್ದರಾಮಯ್ಯ ವಿರುದ್ಧ ಅವರು ಕಿಡಿಗಾರಿದರು.

17 ವೈದ್ಯಕೀಯ ಕಾಲೇಜುಗಳು, ಬೆಂಗಳೂರಿನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು. ಇರುವ ಹಾಸಿಗೆಗಳನ್ನು ಐಸಿಯು ಮಾಡಬೇಕು, ಆಕ್ಸಿಜನ್ ವೆಂಟಿಲೇಟರ್ ಗಳನ್ನು ಹೆಚ್ಚು ಮಾಡಬೇಕು ಎಂದು ನಮ್ಮ ಇಲಾಖೆಗೆ 815 ಕೋಟಿ ರೂ.ಪ್ರಸ್ತಾವನೆ ಬಂದಿದೆ. ಆದರೆ, ಈವರೆಗೆ ಯಾವುದಕ್ಕೂ ನಾವು ಮಂಜೂರಾತಿ ನೀಡಿಲ್ಲ. ಇದುವರೆಗೆ ನಮ್ಮ ಇಲಾಖೆಯಿಂದ ಖರ್ಚು ಮಾಡಿರುವುದು ಕೇವಲ 33 ಕೋಟಿ ರೂ.ಮಾತ್ರ ಎಂದು ಸುಧಾಕರ್ ಹೇಳಿದರು.

ಡ್ರಾಗರ್ ಕಂಪೆನಿಯ 140 ಐಸಿಯು ವೆಂಟಿಲೇಟರ್ ಗಳನ್ನು ತಲಾ 13.60 ಲಕ್ಷ ರೂ.ವೆಚ್ಚದಲ್ಲಿ ಖರೀದಿ ಮಾಡಿದ್ದೇವೆ. ಆದರೆ, 2019ರ ಜನವರಿಯಲ್ಲಿ 21.50 ಲಕ್ಷ ರೂ.ಕೊಟ್ಟು ವೆಂಟಿಲೇಟರ್ ಖರೀದಿ ಮಾಡುವ ಅಗತ್ಯವೇನಿತ್ತು. ಅಮೆರಿಕದಂತಹ ಮುಂದುವರಿದ ದೇಶದಲ್ಲೆ ವೆಂಟಿಲೇಟರ್ ಗಳು ಸಿಗುತ್ತಿಲ್ಲ. ನಮ್ಮ ಪರಿಶ್ರಮಕ್ಕೆ ಬೆನ್ನುತಟ್ಟುವ ಬದಲು, ಬೆನ್ನಿಗೆ ತಿವಿಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನದಿಂದ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನ ಮಾಡಬಹುದು ಎಂದು ಭಾವಿಸಿದ್ದರೆ, ಅದು ನಿಮ್ಮ ಭ್ರಮೆ. 120 ದಿನಗಳಿಂದ ನಾವು, ನಮ್ಮ ಅಧಿಕಾರಿಗಳು ರಜೆ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಯಾರಾದರೂ ಒಂದು ರೂ. ಭ್ರಷ್ಟಾಚಾರ ಮಾಡಿದ್ದರೆ, ಬಹಿರಂಗವಾಗಿ ನೇಣಿಗೆ ಹಾಕಿ. ಆದರೆ, ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ಜನರನ್ನು ದಿಕ್ಕು ತಪ್ಪಿಸಲು ಹೋಗಬೇಡಿ. ಮಾಹಿತಿ ಕೊರತೆಯಿಂದ ಆಪಾದನೆ ಮಾಡುವುದು ಅಪರಾಧ ಎಂದು ಸುಧಾಕರ್ ಕಿಡಿಕಾರಿದರು.

ಆರ್‍ಟಿಐ ಹಾಕಿ ಮಾಹಿತಿ ಪಡೆದುಕೊಳ್ಳಲಿ. ಪ್ರತಿ ಇಲಾಖಾವಾರು ಚರ್ಚೆಗೆ ಸಿದ್ಧ. ಯಾವ ತನಿಖೆಗೂ ಸಿದ್ಧ. ಕೋವಿಡ್ ಉಪಕರಣ, ಔಷಧಿ ಸಾಮಗ್ರಿ ಖರೀದಿಯಲ್ಲಿ ಯಾವುದೆ ಭ್ರಷ್ಟಾಚಾರ ನಡೆದಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ನಾವು ಖರ್ಚು ಮಾಡಿರುವುದು 892 ಕೋಟಿ ರೂ.ಗಳು. ಇದರಲ್ಲಿ 16,32,328 ಕಟ್ಟಡ ನಿರ್ಮಾಣ ಕಾರ್ಮಿಕರ ಖಾತೆಗಳಿಗೆ ತಲಾ 5 ಸಾವಿರ ರೂ.ಗಳಂತೆ 816.16 ಕೋಟಿ ರೂ.ಗಳನ್ನು ಜಮೆ ಮಾಡಿದ್ದೇವೆ ಎಂದರು.

ಇನ್ನುಳಿದ ಕೆಲಸಗಳಿಗಾಗಿ 76 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ. ಸಿದ್ಧಪಡಿಸಿದ ಊಟಕ್ಕಾಗಿ 25.27 ಕೋಟಿ ರೂ., ಒಣ ಹಣ್ಣುಗಳ ಕಿಟ್‍ಗಳಿಗಾಗಿ 44.89 ಕೋಟಿ ರೂ., ಇದರಲ್ಲಿ ಒಂದು ಸಾವಿರ ಕೋಟಿ ರೂ.ಗಳ ಅವ್ಯವಹಾರ ಹೇಗೆ ನಡೆಯಲು ಸಾಧ್ಯ. ಸಾರಿಗೆಗಾಗಿ 1.43 ಕೋಟಿ ರೂ., ಖರ್ಚು ಮಾಡಿದ್ದೇವೆ. ಮಾ.30 ರಿಂದ ಜು.22ರವರೆಗೆ 85,10,803 ಊಟಗಳನ್ನು ನೀಡಿದ್ದೇವೆ. ಇದಕ್ಕಾಗಿ 23.07 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ ಎಂದು ಅವರು ಹೇಳಿದರು.

ರೈಲಿನಲ್ಲಿ ಪ್ರಯಾಣಿಸಿದ ವಲಸೆ ಕಾರ್ಮಿಕರಿಗೆ 3,67,830 ಊಟ, ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಹೋದ ಕಾರ್ಮಿಕರಿಗೆ 41,500 ಊಟ, ಐಬಿಐಸಿ ಕೇಂದ್ರ ಕಾರ್ಮಿಕರಿಗೆ 17 ಸಾವಿರ ಫುಡ್ ಕಿಟ್‍ಗಳನ್ನು ಕೊಟ್ಟಿದ್ದೇವೆ. ಒಟ್ಟಾರೆಯಾಗಿ ನಾವು 5.58 ಲಕ್ಷ ಕಿಟ್‍ಗಳನ್ನು ವಿತರಣೆ ಮಾಡಿದ್ದೇವೆ. ವಿರೋಧ ಪಕ್ಷದ ನಾಯಕರು ಕಾರ್ಮಿಕ ಇಲಾಖೆ ಬಗ್ಗೆ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಶಿವರಾಮ್ ಹೆಬ್ಬಾರ್ ಹೇಳಿದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ತುಮಕೂರು ರಸ್ತೆಯಲ್ಲಿ ಬಿಐಇಸಿಯಲ್ಲಿನ ಕೋವಿಡ್ ಕೇರ್ ಸೆಂಟರ್ ನಲ್ಲಿ 10 ಸಾವಿರ ಹಾಸಿಗೆಗಳನ್ನು ಅಳವಡಿಸಲಾಗಿದ್ದು, ಈವರೆಗೆ ಬಾಡಿಗೆ ವಿಚಾರದಲ್ಲಿ ಅಂತಿಮವಾಗಿಲ್ಲ. ಅಧಿಕಾರಿಗಳ ತಂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸರಕಾರಕ್ಕೆ ನೀಡುವ ವರದಿ ಆಧರಿಸಿ ಬಾಡಿಗೆ ನೀಡಬೇಕೆ ಅಥವಾ ಖರೀದಿಸಬೇಕೆ ಎಂಬುದರ ಕುರಿತು ನಿರ್ಧರಿಸಲಾಗುವುದು ಎಂದರು.

ಸಂಕಷ್ಟದ ಈ ಪರಿಸ್ಥಿತಿಯಲ್ಲಿ ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರೆಲ್ಲ ಗೂಡು ಸೇರಿಕೊಂಡಿದ್ದಾರೆ. ಅವರು ಕೇಳಿರುವ ಲೆಕ್ಕವನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದು ಅಶೋಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News