×
Ad

ವಿರೋಧ ಪಕ್ಷದ ನಾಯಕರ ಆರೋಪಗಳು ಆಧಾರ ರಹಿತ: ಡಿಸಿಎಂ ಡಾ.ಅಶ್ವತ್ಥ ನಾರಾಯಣ

Update: 2020-07-23 21:05 IST

ಬೆಂಗಳೂರು, ಜು.23: ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಅತ್ಯಂತ ಪಾರದರ್ಶಕವಾಗಿದ್ದು, ವಿರೋಧ ಪಕ್ಷದ ನಾಯಕರು ಮಾಡಿರುವ ಆರೋಪಗಳೆಲ್ಲ ಆಧಾರ ರಹಿತ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೆ ಬಗೆಯ ಅವ್ಯವಹಾರವಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ 750 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಇದುವರೆಗೆ ಆರೋಗ್ಯ ಇಲಾಖೆಯಲ್ಲಿ ಖರ್ಚು ಮಾಡಿರುವುದು 290 ಕೋಟಿ ರೂ.ಮಾತ್ರ ಎಂದರು.

ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ ಚೀನಾದಿಂದ 2100 ರೂ.ಗಳಂತೆ ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಭಾರತ-ಚೀನಾ ನಡುವೆ ಸಂಘರ್ಷ ನಡೆದದ್ದು ಕಳೆದ ತಿಂಗಳು. ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನಮ್ಮ ದೇಶದಲ್ಲಿ ಪಿಪಿಇ ಕಿಟ್‍ಗಳನ್ನು ತಯಾರಿಸುತ್ತಿರಲಿಲ್ಲ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ನಮ್ಮ ಅಧಿಕಾರಿಗಳು ಚೀನಾದಲ್ಲಿರುವ ಭಾರತದ ರಾಯಭಾರಿಗೆ ಒತ್ತಾಯ ಮಾಡಿ 3 ಲಕ್ಷ ಪಿಪಿಇ ಕಿಟ್‍ಗಳನ್ನು ತರಿಸಿದ್ದಾರೆ. ಮಾರ್ಚ್ ನಲ್ಲಿ ಸರಬರಾಜು ಆಗಿರುವುದಕ್ಕೂ, ಇವತ್ತಿನ ಘಟನೆಗೂ ಹೋಲಿಕೆ ಮಾಡುವುದು ಸರಿಯೇ? ಫ್ಲಿಫ್‍ಕಾರ್ಟ್ ನಲ್ಲಿ ಇವತ್ತು ಪಿಪಿಇ ಕಿಟ್ 3900 ರೂ.ಗಳಿಗೆ ಮಾರಾಟವಾಗುತ್ತಿದೆ ಎಂದು ಅವರು ಹೇಳಿದರು.

ತಮಿಳುನಾಡಿನಲ್ಲಿ 4 ಲಕ್ಷ ರೂ.ಗಳಿಗೆ ವೆಂಟಿಲೇಟರ್ ಸಿಗುತ್ತಿದೆ. ನಮ್ಮ ರಾಜ್ಯದಲ್ಲಿ ಯಾಕೆ 18 ಲಕ್ಷ ರೂ.ಗಳನ್ನು ನೀಡಿ ಖರೀದಿಸಲಾಗುತ್ತಿದೆ ಎಂದು ಆರೋಪಿಸುತ್ತಿರುವವರು, 2019ರ ಜನವರಿಯಲ್ಲಿ ಹೋಂ ಮೆಡಿಕ್ಸ್ ಕಂಪೆನಿಯಿಂದ ತಲಾ 21.73 ಲಕ್ಷ ರೂ.ಗಳಂತೆ 9 ವೆಂಟಿಲೇಟರ್ ಖರೀದಿಸುವ ಅಗತ್ಯವೇನಿತ್ತು. ಆಗ ಯಾವ ಕೋವಿಡ್ ಪರಿಸ್ಥಿತಿ ಎದುರಾಗಿತ್ತು ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು.

ಆಂಬ್ಯುಲೆನ್ಸ್ ನಲ್ಲಿ ಅಳವಡಿಸುವ ವೆಂಟಿಲೇಟರ್ ಗೂ ರೆಗ್ಯುಲರ್ ವೆಂಟಿಲೇಟರ್ ನಲ್ಲಿರುವ ಸೌಲಭ್ಯಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೆ. ನಾವು 11.60 ಲಕ್ಷ ಮಾಸ್ಕ್ ಗಳನ್ನು 147 ರೂ.ಗಳಂತೆ ಖರೀದಿ ಮಾಡಿದ್ದೇವೆ. ಇವತ್ತು ಅದೇ ಮಾಸ್ಕ್ 44 ರೂ.ಗಳಿಗೆ ಲಭ್ಯವಿದೆ. ಎನ್95 ಮಾಸ್ಕ್ ಗಳನ್ನು ನಾವು 97 ರೂ.ಗಳಿಗೆ ಖರೀದಿ ಮಾಡಿದ್ದೆವು. ಇವತ್ತು ಮಾರುಕಟ್ಟೆಯಲ್ಲಿ 200 ರೂ.ಆಗಿದೆ. ನಮ್ಮ ಸರಕಾರ ಸುರಕ್ಷ ಸಾಮಗ್ರಿಗಳ ಕೊರತೆಯನ್ನು ನೀಗಿಸುವ ಕೆಲಸ ಮಾಡಿದೆ ಎಂದು ಅವರು ಹೇಳಿದರು.

ಎಸ್.ಎಂ.ಫಾರ್ಮಸ್ಯೂಟಿಕಲ್ ಸಂಸ್ಥೆಯವರಿಗೆ ನಾವು ಸ್ಯಾನಿಟೈಸರ್ ಸರಬರಾಜು ಮಾಡಲು ಆರ್ಡರ್ ಮಾಡಿದ್ದೆವು. ಆದರೆ, ಅವರು ಸರಬರಾಜು ಮಾಡಿಲ್ಲ. ಇದರಲ್ಲಿ ಅವ್ಯವಹಾರ ಹೇಗೆ ನಡೆಯಲು ಸಾಧ್ಯ? ಇವತ್ತು ನಮ್ಮ ರಾಜ್ಯದಲ್ಲಿ 4 ಲಕ್ಷ ಲೀಟರ್ ಸ್ಯಾನಿಟೈಸರ್ ಉತ್ಪಾದನೆ ಯಾಗುತ್ತಿದೆ. 200 ಎಂಎಲ್ ಗೆ 100 ರೂ.ನೀಡಿ ಖರೀದಿ ಮಾಡಲು ಕೇಂದ್ರ ಸರಕಾರವೆ ಅನುಮತಿ ನೀಡಿದೆ. ಆಕ್ಸಿಜನ್ ಅನ್ನು ನಾವು ದುಡ್ಡುಕೊಟ್ಟು ಖರೀದಿನೆ ಮಾಡಿಲ್ಲ. 11.40 ರೂ.ಗಳಂತೆ 30 ಸಾವಿರ ಗ್ಲೌಸ್‍ಗಳನ್ನು ನಾವು ಖರೀದಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ನವರು 40 ರೂ.ಗಳಿಗೆ ಖರೀದಿಸಿದ್ದೇವೆ ಎಂದು ದೂರುತ್ತಿದ್ದಾರೆ ಎಂದು ಅವರು ಹೇಳಿದರು.

ಮೈಸೂರಿನ ಸ್ಕ್ಯಾನ್ ರೇ ಟೆಕ್ನಾಲಜೀಸ್ ಕಂಪೆನಿಗೆ 130 ವೆಂಟಿಲೇಟರ್ ಒದಗಿಸುವಂತೆ ಆರ್ಡರ್ ಮಾಡಲಾಗಿತ್ತು. ತಲಾ 5.60 ಲಕ್ಷ ರೂ.ಗಳಂತೆ 80 ವೆಂಟಿಲೇಟರ್ ಸರಬರಾಜು ಮಾಡಿದ್ದಾರೆ. 7.28 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಚೆನ್ನೈನ ಟ್ಯಾಮ್ಸ್ ಹೆಲ್ತ್ ಕೇರ್ ಏಜೆನ್ಸಿ ತಲಾ 11,92,800 ರೂ.ಗಳಂತೆ 4 ವೆಂಟಿಲೇಟರ್ ಸರಬರಾಜು ಮಾಡಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಹೋಂ ಮೆಡಿಕ್ಸ್ ಸಂಸ್ಥೆಯವರು 13.44 ಲಕ್ಷ ರೂ.ಗಳಂತೆ 5 ವೆಂಟಿಲೇಟರ್ ಸರಬರಾಜು ಮಾಡಿದ್ದಾರೆ. ಇದೇ ಸಂಸ್ಥೆಯಿಂದ 2019ರ ಜನವರಿಯಲ್ಲಿ ಆರೋಗ್ಯ ಇಲಾಖೆಯು 21.73 ಲಕ್ಷರೂ.ಗಳನ್ನು ಪಾವತಿಸಿ ವೆಂಟಿಲೇಟರ್ ಖರೀದಿಸಿದೆ. ಕೇರಳ ರಾಜ್ಯದಲ್ಲಿ ಹೈಫ್ಲೋ ನಾಝಲ್ ಅನ್ನು 2.94 ಲಕ್ಷ ರೂ.ಗಳಿಗೆ ಖರೀದಿಸಿದ್ದರೆ, ನಮ್ಮ ರಾಜ್ಯದಲ್ಲಿ 2.82 ಲಕ್ಷ ರೂ.ಗಳಿಗೆ ಖರೀದಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News