×
Ad

ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ 500 ಬೆಡ್: ಅಶ್ವತ್ಥ ನಾರಾಯಣ

Update: 2020-07-25 22:48 IST

ಬೆಂಗಳೂರು, ಜು.25: ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗಾಗಿ ಈಗಾಗಲೇ 340 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಮುಂದಿನ ಎರಡು ವಾರದಲ್ಲಿ ಅವುಗಳನ್ನು 500 ಹಾಸಿಗೆಗಳಿಗೆ ಹೆಚ್ಚಿಸಿ ಸರಕಾರದ ವಶಕ್ಕೆ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಶನಿವಾರ ಬೆಳಗ್ಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಆರ್.ಜಯರಾಮ್ ಹಾಗೂ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಮೂರ್ತಿ ಈ ಭರವಸೆ ನೀಡಿದರು.

ಪದೇ ಪದೇ ಮನವಿ ಮಾಡಿದರೂ ತಮ್ಮಲ್ಲಿರುವ ಅರ್ಧದಷ್ಟು ಹಾಸಿಗೆಗಳನ್ನು ಸರಕಾರಕ್ಕೆ ನೀಡಲು ಮೀನಾಮೇಷ ಎಣಿಸುತ್ತಿರುವ ಕೆಲ ಖಾಸಗಿ ಆಸ್ಪತ್ರೆಗಳ ನಡುವೆಯೇ ನಾವು ಕೇಳುವುದಕ್ಕೆ ಮುನ್ನವೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ, ಹಾಸಿಗೆಗಳನ್ನು ನೀಡಲು ಮುಂದೆ ಬಂದಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬದ್ಧತೆ ಮತ್ತು ಸೇವಾ ತತ್ಪರತೆಯನ್ನು ಮುಕ್ತಮನಸ್ಸಿನಿಂದ ಮೆಚ್ಚಲೇಬೇಕು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಸದ್ಯಕ್ಕೆ 340 ಹಾಸಿಗೆಗಳು ಕೋವಿಡ್ ಸೋಂಕಿತರಿಗೆ ಸಿದ್ಧವಾಗಿ ಬಳಕೆಯಾಗುತ್ತಿವೆ. ಇನ್ನೆರಡು ವಾರದಲ್ಲಿ ಮತ್ತೆ 160 ಹಾಸಿಗೆಗಳು ಲಭ್ಯವಾಗುತ್ತವೆ ಎಂದು ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ವೆಂಟಿಲೇಟರ್ ಸಂಖ್ಯೆ ಹೆಚ್ಚಳ: ಸದ್ಯಕ್ಕೆ ಈ ಆಸ್ಪತ್ರೆಯಲ್ಲಿ ಐದು ವೆಂಟಿಲೇಟರುಗಳಿವೆ. ಅವುಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಬೇಕು. 50 ಐಸಿಯು ಬೆಡ್‍ಗಳನ್ನು ಕನಿಷ್ಠ 100 ರಿಂದ 150 ಮಾಡಬೇಕು ಎಂದು ಅಶ್ವತ್ಥ ನಾರಾಯಣ ಮಾಡಿದ ಮನವಿಗೆ ಅವರು ಸ್ಪಂದಿಸಿದರು.

ಔಷಧ ಪೂರೈಕೆ: ಕೋವಿಡ್ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ’ರೆಮೀಡಿಸ್ ಸ್ವೀರ್’ ಎಂಬ ಚುಚ್ಚುಮದ್ದಿನ ಕೊರತೆ ಇದ್ದು, ಅದನ್ನು ಸರಕಾರ ಪೂರೈಸಬೇಕು ಎಂದು ಆಸ್ಪತ್ರೆ ಆಡಳಿತವರ್ಗ ಮನವಿ ಮಾಡಿತು. ಇದಕ್ಕೂ ಸ್ಪಂದಿಸಿದ ಡಿಸಿಎಂ, ಅಗತ್ಯವಿರುವಷ್ಟು ಚುಚ್ಚುಮದ್ದು, ಮತ್ತಿತರೆ ಎಲ್ಲ ಔಷಧಗಳನ್ನು ಕೂಡಲೇ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಿಬ್ಬಂದಿ ಕೊರತೆ: ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಯ ಪೈಕಿ ಶೇ.10ರಷ್ಟು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲುತ್ತಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಚಿಕಿತ್ಸೆ ವೇಳೆ ಸೋಂಕು ತಗುಲುತ್ತಿದೆ. ಆದರೂ ನಮ್ಮ ಸಿಬ್ಬಂದಿ ಛಲದಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಆಸ್ಪತ್ರೆಯಲ್ಲಿ ವೈದ್ಯರು, ಅರೆ ವ್ಯದ್ಯಕೀಯ ಸಿಬ್ಬಂದಿ ಕೊರತೆ ಇದೆ ಎಂದು ಸಿಇಒ ಶ್ರೀನಿವಾಸಮೂರ್ತಿ ಹೇಳಿದರು.

ಕೆ.ಸಿ.ಜನರಲ್ ಆಸ್ಪತ್ರೆಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ನೆರವು ಒದಗಿಸಬೇಕೆನ್ನುವ ಡಿಸಿಎಂ ಅವರ ಮನವಿಗೂ ಸ್ಪಂದಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಆರೋಗ್ಯ ಮತ್ತು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಮಯ್ಯ ಆಸ್ಪತ್ರೆಗೆ 10 ವೆಂಟಿಲೇಟರ್, 10 ಡಯಾಲಿಸಿಸ್ ಯಂತ್ರ

ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಕಾರಣಕ್ಕೆ ಕೊರತೆ ಇರುವ 10 ವೆಂಟಿಲೇಟರ್ ಮತ್ತು 10 ಡಯಾಲಿಸಿಸ್ ಯಂತ್ರಗಳನ್ನು ದಾನಿಗಳಿಂದ ಕೊಡಿಸುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಇದರ ಜತಗೆ ರೋಗಿಗಳಿಗೆ ಆಮ್ಲಜನಕ ಒದಗಿಸುವ 20 ಎಚ್‍ಎಫ್‍ಎನ್‍ಸಿ ಯಂತ್ರಗಳು ಕೂಡ ಒದಗಿಸಲಾಗುವುದು. ಸರಕಾರಕ್ಕೆ 20 ವೆಂಟಿಲೇಟರ್‍ಗೆ ರಾಮಯ್ಯ ಆಸ್ಪತ್ರೆ ಮನವಿ ಸಲ್ಲಿಸಿದ್ದು ಅವುಗಳನ್ನು ತ್ವರಿತವಾಗಿ ಕೊಡಿಸಲಾಗುವುದು. ಸರಕಾರಿ ಆಸ್ಪತ್ರೆಯಿಂದ ಶಿಫಾರಸ್ಸಾಗುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಿ ಎನ್ನುವ ಕಾರಣಕ್ಕೆ ಇಷ್ಟೂ ಉಪಕರಣಗಳನ್ನು ಕೊಡಿಸಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News