ಕೋವಿಡ್-19 ಚಿಕಿತ್ಸೆಗೆ ಶಿವಾಜಿನಗರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ: ಸಚಿವ ವಿ.ಸೋಮಣ್ಣ

Update: 2020-07-25 18:17 GMT

ಬೆಂಗಳೂರು, ಜು. 25: ಕೋವಿಡ್-19 ವೈರಸ್ ಸೋಂಕು ನಿಯಂತ್ರಣ ಸಲುವಾಗಿ ಶಿವಾಜಿನಗರದಲ್ಲಿ ಸುಸಜ್ಜಿತವಾದ ಬ್ರಾಡ್‍ವೇ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ವಸತಿ ಸಚಿವರು ಹಾಗೂ ಬೆಂಗಳೂರು ನಗರದ ಪೂರ್ವ ವಲಯದ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ತಿಳಿಸಿದ್ದಾರೆ.

ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವ ವಲಯದ ಉಸ್ತುವಾರಿ ಆಗಿರುವ ಸಚಿವ ವಿ.ಸೋಮಣ್ಣ ಅವರು ನಗರದ ಪೂರ್ವವಲಯ ವ್ಯಾಪ್ತಿಯ ಶಿವಾಜಿನಗರದ ಬ್ರಾಡ್‍ವೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅವರು ಮಾತನಾಡಿದರು.

ಬ್ರಾಡ್‍ವೇ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿತರಿಗೆ 150ಕ್ಕೂ ಹೆಚ್ಚು ಬೆಡ್‍ಗಳನ್ನು ಹಾಗೂ ಐಸಿಯು ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಈ ಆಸ್ಪತ್ರೆ ಮುಂದಿನ ವಾರದಳೊಗೆ ಉದ್ಘಾಟಿಸಲಾಗುತ್ತದೆ ಎಂದು ಹೇಳಿದರು. ನಂತರ ಇಂದಿರಾನಗರದ ಇಎಸ್‍ಐ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆ ಕಾಮಗಾರಿಗಳನ್ನು ಮುಂದಿನ ವಾರದಳೊಗೆ ಪೂರ್ಣಗೊಳಿಸಬೇಕೆಂದು ಹಾಗೂ ಸ್ವಚ್ಛತೆ ಕಾಪಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊರೋನ ವೈರಸ್ ಸೋಂಕಿತರಿಗೆ ಮೊದಲ ಹಂತದಲ್ಲಿ 75 ಬೆಡ್‍ಗಳು ವ್ಯವಸ್ಥೆ ಮಾಡಲಾಗಿದ್ದು. ಎರಡನೆ ಹಂತದಲ್ಲಿ ಇನ್ನೂ ಹೆಚ್ಚು ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಶಾಂತಿನಗರ ಕ್ಷೇತ್ರ ವ್ಯಾಪ್ತಿಯ ಪ್ರೈಮ್ ರೋಸ್ ರಸ್ತೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ, ಬಡವರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು. ಕೊರೋನ ವೈರಸ್‍ನಿಂದ ಸಾರ್ವಜನಿಕರು ಭಯ ಪಡಬೇಡಿ ಎಂದು ಸಲಹೆ ನೀಡಿದರು. ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಿವಾಜಿನನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್, ಶಾಂತಿನಗರ ಕ್ಷೇತ್ರದ ಶಾಸಕ ಎಸ್.ಎ.ಹಾರಿಸ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಬೆಂಗಳೂರು ಪೂರ್ವ ವಲಯದ ಜಂಟಿ ಆಯುಕ್ತರು ಪಲ್ಲವಿ, ಬೌರಿಂಗ್ ಆಸ್ಪತ್ರೆ ನಿರ್ದೇಶಕರು ಡಾ.ಮನೋಜ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News