×
Ad

ಸರಕಾರದ ವಿರುದ್ಧ ಹೋರಾಟದ ಬಗ್ಗೆ ಸಭೆ ಕರೆದು ತೀರ್ಮಾನ: ಬೆಂಗಳೂರು ವಕೀಲರ ಸಂಘ

Update: 2020-07-25 23:51 IST

ಬೆಂಗಳೂರು, ಜು.25: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಸಹಾಯ ಮಾಡುವ ಉದ್ದೇಶದಿಂದ ವಕೀಲರ ಕಲ್ಯಾಣ ನಿಧಿಗೆ ಐದು ಕೋಟಿ ರೂ.ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಈಗ ಆ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ರಾಜ್ಯ ವಕೀಲರ ಪರಿಷತ್‍ಗೆ ಪತ್ರ ಬರೆದಿದ್ದು, ಈ ನಿರ್ಧಾರವನ್ನು ಖಂಡಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಶನಿವಾರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಎ.ಪಿ.ರಂಗನಾಥ್ ಅವರು, ಆರ್ಥಿಕ ಸ್ಥಿತಿಯ ಕಾರಣಗಳನ್ನು ಹೇಳಿಕೊಂಡು ಪತ್ರ ಬರೆಯುವ ಸರಕಾರವು ದಿವಂಗತ ವ್ಯಕ್ತಿಗೆ ಸ್ಮಾರಕ ಕಟ್ಟಲು 5 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದೆ ಎಂದು ಕಿಡಿಕಾರಿದರು.

ರಾಜ್ಯ ಸರಕಾರದ ಪ್ರತಿದಿನದ ಆಡಳಿತದಲ್ಲಿ ಬಹಳ ಮುಖ್ಯ ಪಾತ್ರ ವಹಿಸುವ ವಕೀಲರನ್ನು ನಿರ್ಲಕ್ಷ್ಯ ಮಾಡಿರುವುದು ವಕೀಲರಿಗೆ ನೋವುಂಟು ಮಾಡಿದೆ. ಬದುಕಿರುವ ವಕೀಲರ ಜೀವನವನ್ನು ನಿರ್ಲಕ್ಷಿಸಿರುವುದು ಸರಕಾರಕ್ಕೆ ವಕೀಲರ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News