ರಾಜ್ಯದ ಮತ್ತೋರ್ವ ಸಚಿವರಿಗೆ ಕೊರೋನ ಸೋಂಕು ದೃಢ
Update: 2020-07-26 13:48 IST
ಬೆಂಗಳೂರು, ಜು.26: ಅರಣ್ಯ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರ ಬಳಿಕ ಇದೀಗ ರಾಜ್ಯ ಸರಕಾರದ ಮತ್ತೊಬ್ಬ ಸಚಿವರು ಸೋಂಕಿಗೆ ಒಳಗಾಗಿದ್ದಾರೆ.
ಶುಕ್ರವಾರ ಆನಂದ್ ಸಿಂಗ್ ಅವರು ಸ್ವಯಂ ಪ್ರೇರಿತರಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದರು. ಶನಿವಾರ ರಾತ್ರಿ ಅದರ ವರದಿ ಬಂದಿದ್ದು, ಕೊರೋನ ಸೋಂಕು ತಗಲಿರುವುದು ಧೃಢಪಟ್ಟಿದೆ ಎಂದು ತಿಳಿದುಬಂದಿದೆ.
ಕೊರೋನ ವೈರಸ್ ಸೊಂಕಿನ ಯಾವುದೇ ಲಕ್ಷಣ ಇಲ್ಲದ ಕಾರಣ ಅವರು ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಸಚಿವ ಆನಂದ್ ಸಿಂಗ್ ಅವರು ಕೊರೋನ ಸೋಂಕಿತರಿದ್ದ ವಾರ್ಡ್‌ಗಳಿಗೆ ಖುದ್ದು ಭೇಟಿ ನೀಡಿ ಸೋಂಕಿತರಿಗೆ ಧೈರ್ಯ ತುಂಬಿದ್ದರು. ಅಲ್ಲದೆ, ಅವರ ಕಾರು ಚಾಲಕನಲ್ಲೂ ಕೊರೋನ ಸೋಂಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ.