ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ದಂತ ಮತ್ತು ವೈದ್ಯಕೀಯ ವೇದಿಕೆ ಒತ್ತಾಯ

Update: 2020-07-26 13:14 GMT

ಬೆಂಗಳೂರು, ಜು.26: ಹಲವು ದಿನಗಳಿಂದ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ರಾಜ್ಯ ಸರಕಾರ ಆದ್ಯತೆ ಮೇರೆಗೆ ಕೂಡಲೇ ಈಡೇರಿಸುವಂತೆ ವೈಟ್ ಸ್ಪಾಕ್ರ್ಸ್(ದಂತ ಮತ್ತು ವೈದ್ಯಕೀಯ ವೇದಿಕೆ) ಫೋರಂ ಒತ್ತಾಯಿಸಿದೆ.

ಕಳೆದ ಒಂದು ದಶಕದಿಂದಲೂ ರಾಜ್ಯಾದ್ಯಂತ ಅನಾರೋಗ್ಯ ಪೀಡಿತರು, ಬಾಣಂತಿಯರು, ಗರ್ಭಿಣಿ ಹೆಣ್ಣುಮಕ್ಕಳ ಆರೋಗ್ಯವನ್ನು ಕಾಪಾಡುವುದರಲ್ಲಿ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಜನತೆ ಹಾಗೂ ಆರೋಗ್ಯ ಇಲಾಖೆಯ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವುದು ಸರಕಾರದ ಕರ್ತವ್ಯವಾಗಿದೆ.

ಆಶಾ ಕಾರ್ಯಕರ್ತೆಯರು ನಿಗದಿತ ಸಮಯವಿಲ್ಲದೆ ಬಾಣಂತಿ, ಗರ್ಭಿಣಿ ಮಹಿಳೆಯರಿಗೆ ಸಮಸ್ಯೆ ಎದುರಾದ ಕೂಡಲೇ ನೆರವಿಗೆ ಧಾವಿಸುತ್ತಾರೆ. ಹೀಗಾಗಿ ಇವರು ಕೇಳುತ್ತಿರುವ ಕನಿಷ್ಠ 12 ಸಾವಿರ ರೂ. ಗೌರವಧನವನ್ನು ಸರಕಾರ ಕೊಡಬೇಕು. ಹಾಗೂ ಕೋವಿಡ್ ವಿರುದ್ದ ಹೋರಾಡಲು ಸಮರ್ಪಕ ಪಿಪಿಇ ಕಿಟ್‍ಗಳನ್ನು ಪೂರೈಸಬೇಕೆಂದು ವೈಟ್ ಸ್ಪಾಕ್ರ್ಸ್‍ನ ರಾಜ್ಯ ಸಂಚಾಲಕ ಪ್ರಮೋದ್ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ: ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಎಐಎಂಎಸ್‍ಎಸ್ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಾಳೆ(ಜು.27) ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಎಂದು ಸಮಿತಿಯ ಕಾರ್ಯದರ್ಶಿ ಶಾಂತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News