ಸಂಡೇ ಲಾಕ್‍ಡೌನ್ ಗೆ ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ಧ

Update: 2020-07-26 14:45 GMT

ಬೆಂಗಳೂರು, ಜು.26: ಕೋವಿಡ್-19 ಸೋಂಕು ತಡೆಗಟ್ಟುವಿಕೆಗಾಗಿ ಜಾರಿಗೊಳಿಸಿರುವ ರವಿವಾರದ ಲಾಕ್‍ಡೌನ್‍ಗೆ ರಾಜಧಾನಿ ಬೆಂಗಳೂರಿನ ಎಲ್ಲೆಡೆ ಉತ್ತಮ ಸ್ಪಂದನೆ ದೊರೆತಿದ್ದು, ಔಷಧ, ಹಾಲು, ಹೂವು, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ-ವಾಹಿವಾಟು, ಜನಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಅತ್ಯಂತ ಜನನಿಬಿಡ ಪ್ರದೇಶವಾದ ಇಲ್ಲಿನ ಕೆಬಿಎಸ್ ಬಸ್ ನಿಲ್ದಾಣ, ಕೆಆರ್ ಮಾರುಕಟ್ಟೆ, ಅವೆನ್ಯೂ ರಸ್ತೆ, ಮಡಿವಾಳ, ಮಲ್ಲೇಶ್ವರಂ, ವಿಜಯನಗರ, ಯಶವಂತಪುರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕೂಡ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್ ಮಾಡಿದರು. ಕೆಲ ಕಡೆ ಹೋಟೆಲ್ ಮಾಲಕರು ಬೆಳಿಗ್ಗೆ ಪಾರ್ಸೆಲ್ ನೀಡಲು ಆರಂಭಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅದನ್ನು ಬಂದ್ ಮಾಡಿಸಿದರು.

ಬೆಳಗ್ಗೆ 6ರಿಂದಲೇ ಪೊಲೀಸರು ವಾಹನಗಳಲ್ಲಿ ಗಸ್ತು ಸುತ್ತಿ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದರು. ಕಾರ್ಪೋರೇಷನ್ ವೃತ್ತ, ಎಂಜಿ ರಸ್ತೆ, ಟಿನ್ ಫ್ಯಾಕ್ಟರಿ, ನೆಲಮಂಗಲ ರಸ್ತೆ, ಮೈಸೂರು ರಸ್ತೆ ಸೇರಿದಂತೆ ಸದಾ ಸಂಚಾರ ದಟ್ಟಣೆಯಿಂದ ಇರುತ್ತಿದ್ದ ಸ್ಥಳಗಳು ಬಿಕೋ ಎನ್ನುತ್ತಿದ್ದವು.

ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿತ್ತು. ಅನಗತ್ಯ ಓಡಾಟ ನಡೆಸುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅಡ್ಡ ರಸ್ತೆಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು. ಇನ್ನು, ರಾಜಾಜಿನಗರ, ಹೆಬ್ಬಾಳ, ಮಲ್ಲೇಶ್ವರಂ, ಕೋರಮಂಗಲದ ಬಹುತೇಕ ಕಡೆಗಳಲ್ಲಿ ಪೊಲೀಸರು ಅನಗತ್ಯ ಓಡಾಡುವ ವಾಹನಗಳನ್ನು ಜಪ್ತಿ ಮಾಡಿದರು.

ಅನ್‍ಲಾಕ್ ಆದ ಬಳಿಕದಿಂದ ರವಿವಾರದ ಲಾಕ್‍ಡೌನ್ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಚಾಲ್ತಿಯಲ್ಲಿಟ್ಟಿದ್ದು, ಶನಿವಾರ ರಾತ್ರಿ 9ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೂ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News