ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಿಮಿನಲ್ ಕೇಸ್: ಐಪಿಎಸ್ ಅಧಿಕಾರಿ ಡಿ.ರೂಪಾ
ಬೆಂಗಳೂರು, ಜು.26: ಕೋವಿಡ್-19 ಸಂಬಂಧ ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ಚಿಕಿತ್ಸಾ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದೆಂದು ಕೊರೋನ ನಿರ್ವಹಣೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿಯೂ ಆಗಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ತಿಳಿಸಿದ್ದಾರೆ.
ರವಿವಾರ ನಗರದ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ನಗರ ವ್ಯಾಪ್ತಿಯ ಮೂರು ಆಸ್ಪತ್ರೆಗಳಲ್ಲಿ ಲೋಪದೋಷ ಕಂಡುಬಂದಿವೆ. ಅದನ್ನು ತಿದ್ದಿಕೊಳ್ಳಲು ಸೂಚಿಸಿದ್ದನ್ನು ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಹಾಸಿಗೆ(ಬೆಡ್) ಎಷ್ಟಿದೆ ಎಂದು ನೀವು ಪಟ್ಟಿ ಮಾಡಿ ಹಾಕಬೇಕು. ಆನ್‍ಲೈನ್‍ನಲ್ಲಿ ಪ್ರತಿ ಹಾಸಿಗೆ(ಬೆಡ್) ಮಾಹಿತಿ ಇರಬೇಕು. ಈ ಮೊದಲು ನಾವು ಅವರಿಗೆ ಸರಕಾರದ ಸೂಚನೆಗಳ ಪಾಲಿಸುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಸರಕಾರ ನಿಗದಿ ಮಾಡಿದ ಹಣಕ್ಕಿಂತ ಮೂರು ಪಟ್ಟು ಹಣ ವಸೂಲಿ ಮಾಡಿದ್ದಾರೆ. ಇದರ ಬಗ್ಗೆ ನಿಮಗೆ ಮಾಹಿತಿ ಇಲ್ಲವೇ ಎಂದು ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ಖಾರವಾಗಿಯೇ ಪ್ರಶ್ನೆ ಮಾಡಿದ್ದೇವೆ ಎಂದ ಅವರು, ಸರಕಾರ ನಿಗದಿ ಮಾಡಿರುವ ಚಿಕಿತ್ಸೆ ವೆಚ್ಚವನ್ನಷ್ಟೇ ಹಣ ಪಡೆಯಬೇಕೆಂದು ಸೂಚಿಸಿದ್ದೇವೆ. ಆಸ್ಪತ್ರೆಗಳಲ್ಲಿ, ರೋಗಿಗಳ ಬಳಿ ವಿಮೆ ಇದ್ದರೆ ಹಣ ಮಾಡುವ ಆರೋಪವೂ ಕೇಳಿಬಂದಿದೆ. ಅದರ ಬಗ್ಗೆ ಕೂಡ ನಾವು ಗಮನ ಹರಿಸಿದ್ದೇವೆ ಎಂದು ಹೇಳಿದರು.