ಸಿಇಟಿ ಮುಂದೂಡುವುದೇ ಉತ್ತಮವಲ್ಲವೇ?

Update: 2020-07-26 17:22 GMT

ಮಾನ್ಯರೇ,
  
ರಾಜ್ಯ ಸರಕಾರ ‘ಕಾಮನ್ ಎಂಟ್ರೆನ್ಸ್ ಟೆಸ್ಟ್’ ಎನ್ನುವ ಪರೀಕ್ಷೆಯನ್ನು ಇದೇ ತಿಂಗಳು 30-31ಕ್ಕೆ ನಡೆಸಲು ಹೊರಟಿದೆ. ನಮ್ಮ ರಾಜ್ಯ ಮತ್ತು ಹೊರ ರಾಜ್ಯಗಳ ಸುಮಾರು 2 ಲಕ್ಷದಷ್ಟು ಅಭ್ಯರ್ಥಿಗಳು (ಪಿಯುಸಿ ನಂತರ ಮೆಡಿಕಲ್/ ಇಂಜಿನಿಯರಿಂಗ್) ಈ ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಸರಕಾರ ಕೂಡ ಆ್ಯಂಬುಲೆನ್ಸ್ ವ್ಯವಸ್ಥೆ ಮತ್ತು ಕೋವಿಡ್ ರೋಗಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿಕೊಂಡಿದೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ, ರಾಜ್ಯದಲ್ಲಿಯೇ ಪ್ರತೀ ದಿನ ಸುಮಾರು 100ರಷ್ಟು ಮಂದಿ ಕೋವಿಡ್‌ಗೆ ಬಲಿಯಾಗುತ್ತಿರುವಾಗ, ಪರೀಕ್ಷೆ ನಡೆಸುವುದು ಸರಿಯೇ? ಒಂದೊಂದು ಪರೀಕ್ಷಾ ಕೇಂದ್ರದಲ್ಲಿ ಹತ್ತಾರು ಮಕ್ಕಳು ಎಂದರೂ, ಅವರನ್ನು ಬಿಡಲು ಬರುವ ಅಷ್ಟೇ ಸಂಖ್ಯೆಯ ಪೋಷಕರು, ಸಿಬ್ಬಂದಿ ಸುಲಭವಾಗಿ ಒಂದು ಕೇಂದ್ರದಲ್ಲಿ ದೊಡ್ದ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇಷ್ಟು ದೊಡ್ಡ ಸಂಖ್ಯೆ ಬಹಳ ಸುಲಭವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸುರಕ್ಷಿತ ಅಂತರ ಎಂದರೂ, ಹೊರ ರಾಜ್ಯದಿಂದ ಅಥವಾ ನಮ್ಮ ರಾಜ್ಯದಿಂದಲೇ ಸುಮಾರು 20-30 ಕಿಲೋಮೀಟರ್‌ನಷ್ಟು ಪ್ರಯಾಣಮಾಡಿ ಬರುವ ಮಕ್ಕಳಿಂದ ಕೋವಿಡ್ ಹರಡುವುದಿಲ್ಲ ಎನ್ನಲು ಸಾಧ್ಯವೇ? ಎಲ್ಲಾ 497 ಪರೀಕ್ಷಾ ಕೇಂದ್ರಗಳಲ್ಲಿ ಹೆಲ್ತ್ ಗೈಡ್ ಲೈನ್‌ಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಲಾಗುವುದೆಂದು ಹೇಗೆ ಹೇಳುವುದು? ಒಂದು ವೇಳೆ ಈ ಹೆಲ್ತ್ ಗೈಡ್ ಲೈನ್‌ಗಳನ್ನು ಸರಿಯಾಗಿ ಪಾಲಿಸದಿದ್ದರೆ ಮತ್ತು ದುರದೃಷ್ಟವಷಾತ್ ವಿದ್ಯಾರ್ಥಿಗಳು ಕೋವಿಡ್‌ಗೆ ತುತ್ತಾದರೆ ಯಾರು ಹೊಣೆ? ಇಲ್ಲಿ ನಾವು ಎಷ್ಟೇ ಸುರಕ್ಷತಾ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡರೂ ಅದರ ಅನುಷ್ಠಾನದ ಕಾರ್ಯದಲ್ಲಿ ಆಗುವ ತೊಂದರೆಗಳನ್ನು ನಿಜವಾಗಿಯೂ ಗಮನಿಸಬೇಕಾಗಿದೆ. ಇಷ್ಟೆಲ್ಲ ಮುಂಜಾಗರೂಕತೆ ಇದ್ದರೂ ನಾವು ಪ್ರತೀ ವಿದ್ಯಾರ್ಥಿಯನ್ನು ಪರೀಕ್ಷೆಗೆ ಒಳಪಡಿಸಿದರೂ ಸೋಂಕು ಕಣ್ಣಿಗೆ ಕಾಣದ ರೀತಿಯಲ್ಲಿ ಹರಡುವ ಸಂಭವನೀಯತೆ ಹೆಚ್ಚಿರುತ್ತದೆ. ಅಲ್ಲದೆ ನಮ್ಮ ರಾಜ್ಯದಲ್ಲಿ ವೈದ್ಯರ ಅಭಾವವೂ ಇದೆ.
ಇನ್ನು ಈ ವಿದ್ಯಾರ್ಥಿಗಳ ಮನೆಯಲ್ಲಿ ಯಾರಾದರೂ ಸೋಂಕು ತಗಲಿದವರಿದ್ದರೆ ಅಥವಾ ಅವರ ಮನೆಯಲ್ಲಿ ಯಾರಾದರೂ ಹೋಂ ಕ್ವಾರಂಟೈನ್‌ನಲ್ಲಿದ್ದರೆ ಇಂತಹಾ ಆತಂಕದ ಮಧ್ಯೆ ವಿದ್ಯಾರ್ಥಿಗಳು ಸರಿಯಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವರು ಎಂದು ನಂಬಲು ಸಾಧ್ಯವೇ? ಈ ಪರೀಕ್ಷೆಗಳಿಗಿಂತ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಆರೋಗ್ಯ ಮುಖ್ಯವಲ್ಲವೇ? ಹಠಕ್ಕೆ ಬಿದ್ದು ಪರೀಕ್ಷೆ ನಡೆಸುವುದಕ್ಕಿಂತ ಒಂದಿಷ್ಟು ಸಮಯ ಅದನ್ನು ಮುಂದೂಡುವುದು ಉತ್ತಮವಲ್ಲವೇ?

Writer - ತಲ್ಹ ಇಸ್ಮಾಯಿಲ್ ಬೆಂಗ್ರೆ

contributor

Editor - ತಲ್ಹ ಇಸ್ಮಾಯಿಲ್ ಬೆಂಗ್ರೆ

contributor

Similar News