ರಾಜಸ್ಥಾನದಲ್ಲಿ ಬಹುಮತ ಸಾಬೀತು ವೇಳೆ ಕಾಂಗ್ರೆಸ್ ವಿರುದ್ಧ ಮತ ಹಾಕಿ

Update: 2020-07-27 05:44 GMT

ಜೈಪುರ/ಹೊಸದಿಲ್ಲಿ, ಜು.27: ಅಶೋಕ್ ಗೆಹ್ಲೋಟ್ ಸರಕಾರ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಂದಾದರೆ ಕಾಂಗ್ರೆಸ್ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಬಹುಜನ ಸಮಾಜ ಪಕ್ಷ ತನ್ನ ಆರು ಶಾಸಕರಿಗೆ ವಿಪ್ ಜಾರಿ ಮಾಡಿದೆ.

ಸಚಿನ್ ಪೈಲಟ್ ಹಾಗೂ ಅವರಿಗೆ ನಿಷ್ಠರಾಗಿರುವ ಶಾಸಕರು ಬಂಡಾಯ ಸಾರಿರುವ ಹಿನ್ನೆಲೆಯಲ್ಲಿ ಗೆಹ್ಲೋಟ್ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.

ಎಲ್ಲ ಆರು ಮಂದಿ ಬಿಎಸ್ಪಿ ಶಾಸಕರು ಈಗಾಗಲೇ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದು, ಬಿಎಸ್ಪಿ ಶಾಸಕರು ರಾಜಸ್ಥಾನ ಅಸೆಂಬ್ಲಿಯಲ್ಲಿಲ್ಲ. ಹೀಗಾಗಿ ಬಿಎಸ್ಪಿ ವಿಪ್ ಜಾರಿಗೊಳಿಸಿರುವುದು ಹೊಸ ಗೊಂದಲ ಕಾರಣವಾಗಿದೆ.

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠೆ ಮಾಯಾವತಿ ಇತ್ತೀಚೆಗೆ ನಡೆದಿದ್ದ ರಾಜ್ಯಸಭಾ ಚುನಾವಣೆಯ ವೇಳೆ ಆರು ಶಾಸಕರನ್ನು ಬಿಎಸ್ಪಿ ಶಾಸಕರೆಂದು ಪರಿಗಣಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದು ಸ್ಪೀಕರ್‌ಗೆ ಬಿಟ್ಟ ವಿಚಾರ ಎಂದಿದ್ದ ಆಯೋಗ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿತ್ತು.

ರವಿವಾರ ಬಿಎಸ್ಪಿ ಪಕ್ಷ ತನ್ನ ಶಾಸಕರಾಗಿರುವ ಆರ್.ಗುಧಾ, ಲಖನ್ ಸಿಂಗ್,ದೀಪ್ ಚಂದ್, ಜೆಎಸ್ ಅವಾನ, ಸಂದೀಪ್ ಕುಮಾರ್ ಹಾಗೂ ವಜೀಬ್ ಅಲಿಗೆ ವಿಪ್ ಜಾರಿ ಮಾಡಿತ್ತು.

ಆರು ಶಾಸಕರಿಗೆ ಪ್ರತ್ಯೇಕವಾಗಿ ಹಾಗೂ ಒಟ್ಟಿಗೆ ನೋಟಿಸ್ ನೀಡಲಾಗಿದೆ. ಬಿಎಸ್ಪಿ ಒಂದು ರಾಷ್ಟ್ರೀಯ ಪಕ್ಷ. ರಾಷ್ಟ್ರಮಟ್ಟದಲ್ಲಿ ಬಿಎಸ್ಪಿ ವಿಲೀನವಾಗದೆ ರಾಜ್ಯ ಮಟ್ಟದಲ್ಲಿ ಯಾವುದೇ ವಿಲೀನ ಸಾಧ್ಯವಿಲ್ಲ. ವಿಪ್ ಉಲ್ಲಂಘಿಸಿದರೆ, ಎಲ್ಲರನ್ನು ಅನರ್ಹಗೊಳಿಸಲಾಗುವುದು ಎಂದು ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ಚಂದ್ರ ಮಿಶ್ರಾ ಎಎನ್‌ಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News