ರಾಜಸ್ತಾನದ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

Update: 2020-07-27 14:27 GMT

ಬೆಂಗಳೂರು, ಜು.27: ರಾಜಸ್ತಾನದ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಅನುಸರಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜಸ್ತಾನ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿಯು ಪ್ರಜಾತಂತ್ರ ಹಾಗೂ ಸಂವಿಧಾನದ ಕಗ್ಗೊಲೆ ನಡೆಸುತ್ತಿದೆ ಎಂದು ಆರೋಪಿಸಿ, ಸೋಮವಾರ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಪ್ರಜಾಪ್ರಭುತ್ವ ಉಳಿಸಿ-ಸಂವಿಧಾನ ರಕ್ಷಿಸಿ’ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿಯ ಈ ಷಡ್ಯಂತ್ರದಲ್ಲಿ ರಾಜಸ್ತಾನದ ರಾಜ್ಯಪಾಲರೂ ಭಾಗಿಯಾಗಿದ್ದಾರೆ. ಸಚಿವ ಸಂಪುಟದ ತೀರ್ಮಾನದಂತೆ ನಡೆದುಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಆದರೆ, ಅವರು ಆ ಪಕ್ಷಕ್ಕೆ ಸಹಕಾರ ನೀಡಲು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಎಂದು ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ನಾವು ಯಾವುದೇ ಹಿಂಸಾತ್ಮಕವಾದ ಹೋರಾಟ ಮಾಡುತ್ತಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಅನ್ಯಾಯ ಪ್ರತಿಭಟಿಸಲು ಸಂವಿಧಾನ ಹಕ್ಕು ಕೊಟ್ಟಿದೆ ಎಂದು ಅವರು ಹೇಳಿದರು.

ಸರಕಾರ ಚುನಾಯಿಸುವವರು ಮತದಾರರು. ಆ ಪರಮಾಧಿಕಾರ ಜನರಿಗೆ ಇದೆಯೇ ಹೊರತು  ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನಿ ಸೇರಿದಂತೆ ಯಾರಿಗೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡಲು ಹೊರಟಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಸಂವಿಧಾನಕ್ಕೆ ಅಗೌರವ ತೋರುತ್ತಿರುವುದನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ. ಸಂವಿಧಾನದ ಚೌಕಟ್ಟಿನೊಳಗೆ ಸರಕಾರಗಳು ನಡೆಯಬೇಕು. ಸಂವಿಧಾನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ಕೊಟ್ಟಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಯವರು ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸಿ ನಮ್ಮ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿ ಮಾಡಿ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಕರ್ನಾಟಕದಲ್ಲಿಯೂ ಅದೇ ರೀತಿ ಆಯಿತು. ಯಡಿಯೂರಪ್ಪ ಜನರಿಂದ ಚುನಾಯಿತರಾದ ಮುಖ್ಯಮಂತ್ರಿ ಅಲ್ಲ. ಜನ ಅವರಿಗೆ ಆಶೀರ್ವಾದ ಮಾಡಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ, ಅವರಿಗೆ ಹಣದಾಸೆಗೆ ತೋರಿಸಿ ಮುಖ್ಯಮಂತ್ರಿ ಆಗಿದ್ದಾರೆ. ಇದೀಗ ಅವರು ವಿಧಾನಸೌಧದಲ್ಲಿ ಕೂತಿದ್ದಾರೆ ಎಂದು ಅವರು ಟೀಕಿಸಿದರು.

ಇಡೀ ದೇಶದಲ್ಲಿ ಆಪರೇಷನ್ ಕಮಲ ಎಂಬುದು ಚಾಲ್ತಿಗೆ ಬಂದಿದ್ದರೆ ಅದು ಯಡಿಯೂರಪ್ಪ ಅವರಿಂದ. ಆಪರೇಷನ್ ಕಮಲ, ಆಪರೇಷನ್ ತೆನೆ ಹೊತ್ತ ಮಹಿಳೆ ಎಂಬುದೇ ಇರಲಿಲ್ಲ. 2008ರಲ್ಲಿ ಆಪರೇಷನ್ ಕಮಲ ಆರಂಭಿಸಿದ್ದೇ ಯಡಿಯೂರಪ್ಪ. ಇದೀಗ ಅದೇ ಆಪರೇಷನ್ ಮೂಲಕ ಅವರು ಮತ್ತೆ ಹಿಂಬಾಗಿಲಿನಿಂದ ಸರಕಾರ ರಚನೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕೊರೋನದಂಥ ಸಂಕಷ್ಟದ ಸಮಯದಲ್ಲಿ ಸರಕಾರಕ್ಕೆ ಸಹಕಾರ ನೀಡದೆ ಭ್ರಷ್ಟಾಚಾರದ ಮಾತುಗಳನ್ನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಾರೆ.  ಕೊರೋನ ನಿಯಂತ್ರಣಕ್ಕೆ, ಜನರ ಜೀವ ಉಳಿಸಲಿಕ್ಕೆ  ನಮ್ಮ ಸಹಕಾರ ಸದಾ ಇರುತ್ತದೆ. ಆದರೆ, ವೈದ್ಯ ಉಪಕರಣಗಳ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ನಮ್ಮ ಸಹಕಾರ ಇಲ್ಲ ಎಂದು ಅವರು ಹೇಳಿದರು.

ಈ ಹಿಂದೆ ಬಿಜೆಪಿಯವರು ಮಧ್ಯಪ್ರದೇಶ ಸರಕಾರ ತೆಗೆದರು. ಇದೀಗ ರಾಜಸ್ತಾನ ಸರಕಾರ ತೆಗೆಯಲು ಹೊರಟಿದ್ದಾರೆ. ಅವರಿಗೆ ಕೊರೋನದ ಸಂಕಷ್ಟದ ಸಮಯ ಅನುಭವಕ್ಕೆ ಬಂದಿಲ್ಲವೇ? ಮಾನ, ಮರ್ಯಾದೆ, ನೈತಿಕತೆ ಕಿಂಚಿತ್ತಾದರೂ ಇದ್ದಿದ್ದರೆ ಬಿಜೆಪಿಯವರು ಈ ಕೆಲಸ ಮಾಡುತ್ತಿರಲಿಲ್ಲ. ರಾಜಸ್ಥಾನ ರಾಜ್ಯಪಾಲರು ಒಂದು ಕ್ಷಣವೂ ತಮ್ಮ ಹುದ್ದೆಯಲ್ಲಿ ಮುಂದುವರಿಯಬಾರದು. ಬಿಜೆಪಿ ಸಂವಿಧಾನಬದ್ಧವಾದ ಎಲ್ಲ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಕಚೇರಿಯೂ ಇದರಲ್ಲಿ ಸೇರಿದೆ ಎಂದು ಅವರು ಕಿಡಿಗಾರಿದರು.

ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯಡಿಯೂರಪ್ಪ ಅವರೇನೂ ಶಾಶ್ವತವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವುದಿಲ್ಲ. ಹೀಗಾಗಿ ಪೊಲೀಸರು ಕಾನೂನುಬದ್ಧವಾಗಿ ನಡೆದುಕೊಂಡು ಪ್ರತಿಭಟನೆಗೆ ಹಾಗೂ ರಾಜ್ಯಪಾಲರ ಕಚೇರಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಪ್ರಜಾಪ್ರಭುತ್ವದ ಕಗ್ಗೊಲೆ, ಸಂವಿಧಾನಕ್ಕೆ ಅಗೌರವ, ಸಂವಿಧಾನಬದ್ಧ ಸಂಸ್ಥೆಗಳಿಗೆ ಅಗೌರವ ತೋರಿಸುವ ಪ್ರಧಾನಿಯವರಿಗೆ ಧಿಕ್ಕಾರ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ರಾಜಭವನಕ್ಕೆ ತೆರಳದಂತೆ ತಡೆದ ಪೊಲೀಸರು: ಕೆಪಿಸಿಸಿ ಕಚೇರಿಯಿಂದ ರಾಜಭವನದ ವರೆಗೆ ಕಾಲ್ನಡಿಗೆಯಲ್ಲಿ ಸಾಗಿದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದರು. ಆನಂತರ, ಅಲ್ಲಿಯೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ, ಅಶೋಕ ನಗರ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಯಿತು.

ಸಾಧ್ಯವಾಗದ ರಾಜ್ಯಪಾಲರ ಭೇಟಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಲು ಸಂಜೆ 4 ಗಂಟೆಗೆ ಸಮಯ ನಿಗದಿ ಆಗಿತ್ತು. ಆದರೆ ಪೊಲೀಸರು 4 ಗಂಟೆ ನಂತರ ಮುಖಂಡರನ್ನು ಬಿಡುಗಡೆ ಮಾಡಿದ್ದರಿಂದ ರಾಜ್ಯಪಾಲರ ಭೇಟಿ ಸಾಧ್ಯವಾಗಲಿಲ್ಲ.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾರ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಜಿ.ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಸುರಕ್ಷಿತ ಅಂತರವನ್ನು ಮರೆತು ಕಾಂಗ್ರೆಸ್ ಮುಖಂಡರು ಜಾತ್ರೆಯಂತೆ ರಾಜ್ಯಪಾಲರಿಗೆ ದೂರು ನೀಡಲು ಹೋಗಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಇವರಿಗೆ ಸಾಮಾಜಿಕ ಕಳಕಳಿಗಿಂತ ಪ್ರಚಾರದ ಗೀಳು ಜಾಸ್ತಿ.’ ತಾವು ಇರುವ ಕತ್ತಲೆಯನ್ನು ಅರಿಯದವರು, ಬೆಳಕಿಗಾಗಿ ಎಂದೂ ಹುಡುಕುವುದಿಲ್ಲ’.

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News