ಸಂಕಷ್ಟಕ್ಕೆ ಸಿಲುಕಿರುವ ಸಮುದಾಯಗಳಿಗೆ ನೆರವು: ಸಿಎಂ ಯಡಿಯೂರಪ್ಪ ಭರವಸೆ

Update: 2020-07-27 17:49 GMT

ಬೆಂಗಳೂರು, ಜು. 27: ಕೊರೋನ ಸೋಂಕು ಇನ್ನಷ್ಟು ದಿನಗಳ ಮುಂದುವರಿಯಲಿದ್ದು, ಸಂಕಷ್ಟಕ್ಕೆ ಸಿಲುಕಿರುವ ಮಡಿವಾಳ ಸಮಾಜ ಸೇರಿದಂತೆ ಇನ್ನಿತರ ಸಮುದಾಯಗಳಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ನೆರವು ನೀಡಲು ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೆಲ ಜಿಲ್ಲೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಯಡಿಯೂರಪ್ಪ, ಹಾಸನ ಜಿಲ್ಲೆಯ ಮಡಿವಾಳ ಸಮುದಾಯಕ್ಕೆ ಸೇರಿದ ಪುಷ್ಪಾ ಎಂಬುವವರು, `ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಒಂದು ಬಾರಿ 5 ಸಾವಿರ ರೂ. ಪರಿಹಾರ ನೀಡಿದ್ದು, ಸರಕಾರಕ್ಕೆ ಅಭಿನಂದನೆಗಳು. ಆದರೆ, ಕೊರೋನ ಸೋಂಕಿನ ಸಮಸ್ಯೆ ಸದ್ಯಕ್ಕೆ ಬಗೆಹರಿಯಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ದಿನದಲ್ಲಿ ಸಂಕಷ್ಟದಲ್ಲಿರುವ ಮಡಿವಾಳ ಸಮುದಾಯಕ್ಕೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಅಥವಾ 3-4 ಮಂದಿ ಇರುವ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸಬೇಕು' ಎಂದು ಪುಷ್ಪಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, `ಕೊರೋನ ಸಂಕಷ್ಟಕ್ಕೊಳಗಾಗಿರುವ ಬಡವರು, ರೈತರಿಗೆ, ಕಾರ್ಮಿಕರು ಹಾಗೂ ವಿವಿಧ ವರ್ಗಗಳಿಗೆ ನೆರವು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಕಷ್ಟದಲ್ಲಿರುವವರಿಗೆ ಪರಿಹಾರ ಕಲ್ಪಿಸಲು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ವಹಿಸಲಾಗುವುದು ಎಂದು ಇದೇ ವೇಳೆ ಆಶ್ವಾಸನೆ ನೀಡಿದರು.

ಜನರ ಮೆಚ್ಚುಗೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ರಾಜ್ಯದ ವಿವಿಧ ವಲಯಗಳ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಯ್ದ ಜಿಲ್ಲೆಗಳ 10 ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದರು. ಪ್ರವಾಹ ಮತ್ತು ಕೊರೋನ ವೇಳೆಯಲ್ಲಿ ಎದುರಾದ ಸಂಕಷ್ಟಕ್ಕೆ ಯಡಿಯೂರಪ್ಪ ಸರಕಾರ ಸ್ಪಂದಿಸಿದ್ದು, ಈ ಸರಕಾರ ನಮಗೆ ಹೊಸ ಬದುಕನ್ನು ಕಲ್ಪಿಸಿದೆ ಎಂದು ನೆರೆ ಸಂತ್ರಸ್ತರು ಶ್ಲಾಘಿಸಿದರು.

ನೀರಾವರಿ ಕಲ್ಪಿಸಿ: ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರದುರ್ಗ ಜಿಲ್ಲೆ, ಹಿರಿಯೂರಿನ ರೈತ ಮಹಿಳೆ ವಸಂತ ಕುಮಾರಿ, ತನ್ನ ಸಂಕಷ್ಟವನ್ನು ವಿವರಿಸುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಸಿಎಂ ಗಮನ ಸೆಳೆದಿದ್ದರು. ಆ ಮಹಿಳೆ ಮಾತನಾಡಿ, `ಈರುಳ್ಳಿ ಬೆಳೆಗೆ ಬೆಲೆ ಇಲ್ಲದಿದ್ದ ವೇಳೆ ಈರುಳ್ಳಿ ಖರೀದಿಸಲು ಕ್ರಮ ಕೈಗೊಂಡು ರೈತ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದೀರಿ. ಬೆಳೆ ಪರಿಹಾರ ಸಮರ್ಪಕವಾಗಿ ರೈತರಿಗೆ ತಲುಪಬೇಕು' ಎಂದರು.

ಹಿರಿಯೂರು ಸೇರಿದಂತೆ ಈ ಭಾಗದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ನೀರಾವರಿ ಸಮಸ್ಯೆ ಇದ್ದು, ಇದನ್ನು ಬಗೆಹರಿಸಬೇಕು ಎಂದು ವಸಂತ ಕುಮಾರಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಗ್ಗೆ ಪರಿಶೀಲನೆ ನಡೆಸುವುದು. ಅಲ್ಲದೆ, ಆ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು.

ಧಾರವಾಡದ ದುರ್ಗಪ್ಪ ಹನುಮಂತಪ್ಪ, ತುಮಕೂರಿನ ಕೊರೋನ(ನರ್ಸ್) ವಾರಿಯರ್ ಕಲಾವತಿ, ನಂಜನೂಡಿನ ಬಸವಣ್ಣ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಜ್ಯೋತಿ, ಶಿವಮೊಗ್ಗದ ಮಂಜುಳಾ, ಚಿಕ್ಕಬಳ್ಳಾಪುರ ಜಿಲ್ಲೆಯ ಬಿ.ಎಲ್.ರವಿಚಂದ್ರ, ವಿಜಯಪುರದ ಪದ್ಮಶ್ರೀ, ಬೆಳಗಾವಿಯ ಪವಿತ್ರಾ ಸೇರಿದಂತೆ ಹಲವು ಮಂದಿ ಸರಕಾರ ತಮ್ಮ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News