ಬಿಜೆಪಿಯಿಂದ ಪ್ರಜಾಪ್ರಭುತ್ವ ಕಗ್ಗೊಲೆ: ಡಿ.ಕೆ.ಶಿವಕುಮಾರ್ ವಾಗ್ದಾಳಿ

Update: 2020-07-27 16:17 GMT

ಬೆಂಗಳೂರು, ಜು.27: ದೇಶದ ವಿವಿಧ ರಾಜ್ಯಗಳಲ್ಲಿ ಚುನಾಯಿತ ಸರಕಾರವನ್ನು ಕೆಡವಿ ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ರಾಜಸ್ಥಾನ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳನ್ನು ಕೆಡವುವ ಮೂಲಕ ಬಿಜೆಪಿ ಪ್ರಜಾತಂತ್ರ ಹಾಗೂ ಸಂವಿಧಾನದ ಕಗ್ಗೊಲೆ ನಡೆಸುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ‘ಪ್ರಜಾಪ್ರಭುತ್ವ ಉಳಿಸಿ-ಸಂವಿಧಾನ ರಕ್ಷಿಸಿ’ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಇಡೀ ವಿಶ್ವ ಗೌರವಿಸುತ್ತಿದೆ. ಪ್ರಜಾಪ್ರಭುತ್ವ ಅಂದರೆ ಇಡೀ ವಿಶ್ವ ಭಾರತದತ್ತ ತಿರುಗಿ ನೋಡುತ್ತಿತ್ತು. ಆದರೆ ಬಿಜೆಪಿ ಸರಕಾರ ಬಂದಮೇಲೆ ದೇಶಕ್ಕೆ ಕಪ್ಪುಚುಕ್ಕೆಯಾಗಿದೆ. ಚುನಾಯಿತ ಸರಕಾರಗಳನ್ನು ಬೀಳಿಸುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಇಡೀ ರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಅವರಿಗೆ ಸಮಾಧಾನವಿಲ್ಲ ಎಂದು ಶಿವಕುಮಾರ್ ಟೀಕಿಸಿದರು.

ಕರ್ನಾಟಕ, ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮಾಡಿ ಸರಕಾರ ಬೀಳಿಸಿ ತಾವು ಅಧಿಕಾರಕ್ಕೆ ಬಂದರು, ಮಹಾರಾಷ್ಟ್ರದಲ್ಲಿ ಮಧ್ಯರಾತ್ರಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದರು. ಈ ವೇಳೆ ರಾಜ್ಯಪಾಲರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಯಿತು ಎಂದು ಇಡೀ ವಿಶ್ವ ನೋಡಿದೆ. ಈಗ ರಾಜಸ್ಥಾನದಲ್ಲಿ ಸರಕಾರ ಬೀಳಿಸಲು ರಾಜ್ಯಪಾಲರ ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದರು.

ಬಿಜೆಪಿಯ ಈ ನಡೆ ವಿರುದ್ಧ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಪತ್ರ ಕಳುಹಿಸಲು ಹೋದರೆ ಪೊಲೀಸರನ್ನು ಉಪಯೋಗಿಸಿಕೊಂಡು ರಾಜಭವನಕ್ಕೆ ಹೋಗದಂತೆ ತಡೆಯಲಾಗಿದೆ. ನಾವು ಗಲಾಟೆ ಮಾಡುತ್ತಿಲ್ಲ, ಕಾನೂನು ಉಲ್ಲಂಘನೆ ಮಾಡಿಲ್ಲ. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಶಿವಕುಮಾರ್ ಕಿಡಿಗಾರಿದರು.

ನಾವು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಿ ರಕ್ಷಣೆ ಮಾಡುವಂತೆ ಮನವಿ ಮಾಡಲು ಹೋಗುತ್ತಿದ್ದೇವೆ. ಈ ಹಕ್ಕನ್ನು ಕಸಿದುಕೊಳ್ಳಬೇಡಿ. ನಿಮ್ಮ ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ನಮ್ಮ ಧ್ವನಿ ಹತ್ತಿಕ್ಕಲು ನಿಮಗೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದ ಉತ್ಸಾಹ ಕುಗ್ಗಿಸಲು ಬಿಜೆಪಿಗಾಗಲಿ, ಪ್ರಧಾನಮಂತ್ರಿಗಾಗಲಿ ಸಾಧ್ಯವಿಲ್ಲ. ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಲು ನಮ್ಮ ಪ್ರಾಣ ತ್ಯಾಗ ಮಾಡಲು ಹಿಂಜರಿಯುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News