×
Ad

ಬೆಂಗಳೂರು: ಬಿಐಇಸಿ ಕೋವಿಡ್ ಆರೈಕೆ ಕೇಂದ್ರ ಉದ್ಘಾಟನೆ; 6500 ಹಾಸಿಗೆಗಳ ವ್ಯವಸ್ಥೆ

Update: 2020-07-27 22:50 IST

ಬೆಂಗಳೂರು, ಜು.27: ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಲಾದ ಕೋವಿಡ್ ಆರೈಕೆ ಕೇಂದ್ರವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್ ಮತ್ತು ಮೇಯರ್ ಎಂ.ಗೌತಮ್ ಕುಮಾರ್ ಸೋಮವಾರ ಉದ್ಘಾಟಿಸಿದರು.

ಬಿಐಇಸಿ ಕೋವಿಡ್ ಆರೈಕೆ ಕೇಂದ್ರ ಪ್ರಸ್ತುತ ನಗರದ ದೊಡ್ಡ ಆರೈಕೆ ಕೇಂದ್ರವಾಗಿದ್ದು, ಸದ್ಯಕ್ಕೆ 6,500 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 5 ಸಾವಿರ ಹಾಸಿಗೆಗಳನ್ನು ರೋಗ ಲಕ್ಷಣಗಳಿಲ್ಲದ ಸೋಂಕಿತರ ಆರೈಕೆಗೆ ಬಳಸಲಾಗುತ್ತಿದ್ದು, ಉಳಿದ 1,500 ಹಾಸಿಗೆಗಳನ್ನು ಅಲ್ಲಿ ಸೋಂಕಿತರ ಆರೈಕೆ ಮಾಡುವ ವೈದ್ಯಕೀಯ ಮತ್ತು ಇತರೆ ಸಿಬ್ಬಂದಿಗೆ ಮೀಸಲಿಡಲಾಗಿದೆ. ಈಗ ಸಭಾಂಗಣ 5ರಲ್ಲಿ ನಿರ್ಮಿಸಲಾದ 24 ವಾರ್ಡ್ ಗಳ 1,536 ಹಾಸಿಗೆಗಳನ್ನು ಮೊದಲ ಹಂತವಾಗಿ ಬಳಸಲಾಗುತ್ತದೆ.

ಕೊರೋನ ಸೋಂಕಿತರ ಮನರಂಜನೆಗಾಗಿ ದೊಡ್ಡ ಎಲ್‍ಇಡಿ ಪರದೆಯ ಟಿವಿ, ಕುಳಿತು ಮಾತನಾಡಲು ಸೋಫಾ, ಟೇಬಲ್‍ಗಳು ಹಾಗೂ ಒಂದು ಬಾರಿಗೆ 350 ಮಂದಿ ಆಹಾರ ಸೇವಿಸಲು ಅನುಕೂಲವಾಗುವಂತೆ ದೊಡ್ಡ ಊಟದ ಹಾಲ್ ವ್ಯವಸ್ಥೆ ಮಾಡಲಾಗಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ, ರೋಗಿಗಳ ಸಮಸ್ಯೆ ಆಲಿಸಲು ನಿಯಂತ್ರಣ ಕೊಠಡಿ ಸಹ ಸ್ಥಾಪಿಸಲಾಗಿದೆ. ಸೋಂಕಿತರನ್ನು ದಾಖಲಿಸಿಕೊಳ್ಳಲು ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದ್ದು, ನಿರ್ವಹಣೆಗಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.

250 ಮಂದಿ ವೈದ್ಯರು, 500 ಸ್ಟಾಫ್ ನರ್ಸ್, 700 ಸಹಾಕರು ಮೂರು ಪಾಳಿಯಲ್ಲಿ  ಕಾರ್ಯ ನಿರ್ವಹಿಸಲಿದ್ದಾರೆ. ಹೌಸ್ ಕೀಪಿಂಗ್, ಲ್ಯಾಂಡರಿ ವ್ಯವಸ್ಥೆಗೂ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಸುರಕ್ಷತೆಗಾಗಿ ಮಾರ್ಷಲ್, ಕೆಎಸ್‍ಆರ್ ಪಿ ತುಕಡಿ, ಅಗ್ನಿ ಶಾಮಕ ವಾಹನಗಳನ್ನು ಇರಿಸಲಾಗಿದೆ. ಜತೆಗೆ ಬೆಸ್ಕಾಂನಿಂದ ಪ್ರತ್ಯೇಕ ಲೈನ್ ಎಳೆದು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಕೇಂದ್ರದ ಚಾಲನೆ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಉಪಮೇಯರ್ ರಾಮ್ ಮೋಹನ್‍ರಾಜು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್, ಬಿಬಿಎಂಪಿ ಆಯುಕ್ತ ಏನ್. ಮಂಜುನಾಥ್ ಪ್ರಸಾದ್, ರಾಜ್ಯ ಕೋವಿಡ್ ಆರೈಕೆ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಕುಮಾರ್ ಕಠಾರಿಯಾ, ಮೊದಲಾದವರು ಉಪಸ್ಥಿತರಿದ್ದರು.

ತಿಂಗಳಿಗೆ 11.9 ಕೋಟಿ ರೂ.ಖರ್ಚು

ಪ್ರತಿಯೊಬ್ಬರಿಗೆ ಒಂದು ದಿನದ ಊಟಕ್ಕೆ 250 ರೂ. ಖರ್ಚು ಮಾಡಲಾಗುತ್ತದೆ. ಪ್ರಸ್ತುತ 6,500 ಹಾಸಿಗೆ ಸಾಮರ್ಥ್ಯಕ್ಕೆ ಹಾಸಿಗೆ, ಮಂಚ, ಫ್ಯಾನ್, ಟೇಬಲ್, ಕುಡಿಯುವ ನೀರು, ನೆಲದ ಮ್ಯಾಟ್ ಸೇರಿ 7 ಸಾಮಗ್ರಿಗಳನ್ನು ಖರೀದಿಸಲು 4.02 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು ಫ್ಲೋರಿಂಗ್ ಮಾಡಲು 2.92 ಕೋಟಿ, ಬಾತ್ ರೂಂ, ಟಾಯ್ಲೆಟ್, ಮಗ್ ಸೇರಿ ಒಟ್ಟು 19 ಸಾಮಗ್ರಿಗಳ ತಿಂಗಳ ಬಾಡಿಗೆಗೆ 4.96 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಒಟ್ಟು ಖರ್ಚು ತಿಂಗಳಿಗೆ 11.9 ಕೋಟಿ ರೂ. ಆಗಲಿದೆ. ಈಗ ಖರೀದಿ ಮಾಡಿರುವ ಸಾಮಗ್ರಿಗಳನ್ನು ಸರಕಾರಿ ಆಸ್ಪತ್ರೆಗಳು, ಹಾಸ್ಟೆಲ್‍ಗಳಲ್ಲಿ ಮರುಬಳಕೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

30 ಸಾವಿರ ಹಾಸಿಗೆ ವ್ಯವಸ್ಥೆ ಗುರಿ

ನಗರದಲ್ಲಿ ಒಟ್ಟು 30 ಸಾವಿರ ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಗುರಿಯಿದೆ. ಈಗ 9 ಕಡೆಗಳಲ್ಲಿ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸೋಂಕಿನ ಲಕ್ಷಣ ಇರುವವರಿಗೆ ಹುಡುಕಿ ಚಿಕಿತ್ಸೆ ಕೊಡಲು ಮುಂದಾಗುತ್ತಿದ್ದೇವೆ. ಪ್ರತಿದಿನ ಪರೀಕ್ಷೆ ಹೆಚ್ಚಳ ಮಾಡುವ ಮೂಲ ಸೋಂಕು ನಿಯಂತ್ರಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News