ದಿಲ್ಲಿ ಹಿಂಸಾಚಾರ: ಪ್ರಚೋದನಕಾರಿ ಭಾಷಣ ಸಾಬೀತುಪಡಿಸುವಂತೆ ವೆಲ್ಫೇರ್ ಪಾರ್ಟಿ ಸವಾಲು

Update: 2020-07-27 18:22 GMT

ಬೆಂಗಳೂರು, ಜು.27: ದಿಲ್ಲಿಯ ಪೂರ್ವಯೋಜಿತ ಮುಸ್ಲಿಮ್ ವಿರೋಧಿ ಗಲಭೆಗಳನ್ನು ಮುಸ್ಲಿಮರ ವಿರುದ್ಧವೆ ಬಳಸಲಾಗುತ್ತಿರುವುದು ಖಂಡನೀಯ, ಪ್ರತಿಭಟನೆ ವೇಳೆ ಉದ್ರೇಕಕಾರಿ ಭಾಷಣ ಮಾಡಿರುವುದನ್ನು ಸಾಬೀತುಪಡಿಸಲು ದಿಲ್ಲಿ ಪೊಲೀಸರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೀರ್ ಹುಸೇನ್ ಸವಾಲು ಹಾಕಿದ್ದಾರೆ.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ.ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್ ವಿರುದ್ಧ ದಿಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ದಿಲ್ಲಿಯ ಚಾಂದ್ ಬಾಗ್‍ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತದಲ್ಲಿನ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಮತ್ತು ನ್ಯಾಯವಂಚಿತರ ಸಮಸ್ಯೆಗಳ ಬಗ್ಗೆ ಸಕ್ರಿಯವಾಗಿರುವ ಕಾಸಿಮ್ ರಸೂಲ್ ಇಲ್ಯಾಸ್, ನರೇಂದ್ರ ಮೋದಿ ಸರಕಾರದ ಅಸಂವಿಧಾನಿಕ ನೀತಿಗಳ ವಿರುದ್ಧ ನಿರಂತರವಾಗಿ ಮಾತಾಡುತ್ತಿದ್ದವರು. ಅಷ್ಟು ಮಾತ್ರವಲ್ಲ ಅಸಂವಿಧಾನಿಕ ನಿಯಮವಾದ ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯಾಗಿದ್ದರು ಎಂದು ತಾಹೀರ್ ಹುಸೇನ್ ಹೇಳಿದ್ದಾರೆ.

ಅವರ ವಿರುದ್ಧ ಇದೀಗ ದಿಲ್ಲಿ ಪೊಲೀಸರು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಪೊಲೀಸರ ಈ ನಡೆಯು ನ್ಯಾಯದ ವಾಹಕರ ಹೆಡೆಮುರಿ ಕಟ್ಟುವ ತಂತ್ರವಾಗಿದೆ. ಇದೇ ರೀತಿ ಪ್ರಸಿದ್ಧ ಮತ್ತು ಸಕ್ರಿಯರಾಗಿರುವ ಒಂದು ವಿಭಾಗದ ಹೋರಾಟಗಾರರನ್ನು ನಿರಂತರವಾಗಿ ಬಲೆಗೆ ಬೀಳಿಸುವ ರೀತಿ ಆತಂಕಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ದಿಲ್ಲಿ ಗಲಭೆಯು ಅಲ್ಪಸಂಖ್ಯಾತರ ವಿರುದ್ಧ ನಡೆಸಿದ ಪೂರ್ವಯೋಜಿತ ಕೃತ್ಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಈ ಗಲಭೆಯಲ್ಲಿ ಅಲ್ಪಸಂಖ್ಯಾತರಿಗೆ ಅಪಾರ ನಷ್ಟ ಮತ್ತು ಹಲವು ಜನರ ಮೃತ್ಯು ಸಂಭವಿಸಿದೆ. ಇದೆಲ್ಲವೂ ದಿಲ್ಲಿ ಮುಖ್ಯಮಂತ್ರಿ  ಅರವಿಂದ ಕೇಜ್ರಿವಾಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೂಗಿನ ಅಡಿಯಲ್ಲಿ ನಡೆದಂತಹ ಸಂಭವವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆದರೆ ಗಲಭೆಯ ನಂತರ ಗಲಭೆಗೆ ಬಲಿಯಾದವರ ವಿರುದ್ಧವೇ ದೂರು ದಾಖಲಾಗಿರುವುದು ಷಡ್ಯಂತ್ರವಾಗಿದೆ ಎಂದು ತಾಹೀರ್ ಹುಸೇನ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News