ಸೇನೆ ವಿಭಾಗ ಖಾಸಗೀಕರಣ ವಿರೋಧಿಸಿ ಡಾ.ಹನುಮಂತಯ್ಯರಿಗೆ ಮನವಿ

Update: 2020-07-28 13:03 GMT

ಬೆಂಗಳೂರು, ಜು.28: ಯಾವುದೇ ಕಾರಣಕ್ಕೂ ಭಾರತೀಯ ಸೇನೆಗೆ ಸಂಬಂಧಿಸಿದ ಕ್ಷೇತ್ರ ಮತ್ತು ವಿಭಾಗಗಳನ್ನು ಕೇಂದ್ರ ಸರಕಾರ ಖಾಸಗೀಕರಣ ಮಾಡಬಾರದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 515 ಆರ್ಮಿ ಬೇಸ್ ವರ್ಕ್‍ಶಾಪ್ ಕಾರ್ಮಿಕ ಸಂಘದ ನಿಯೋಗ ಮನವಿ ಸಲ್ಲಿಕೆ ಮಾಡಿದೆ.

ಮಂಗಳವಾರ ಬಸವೇಶ್ವರ ನಗರದಲ್ಲಿರುವ ರಾಜ್ಯಸಭಾ ಉಪಾಧ್ಯಕ್ಷ ಡಾ.ಎಲ್.ಹನುಮಂತಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಭಗತ್ ಸಿಂಗ್ ಬಿಷ್ಟ್, ಉಪಾಧ್ಯಕ್ಷ ಸಮೀವುಲ್ಲಾಖಾನ್, ಹೋರಾಟಗಾರ ಪಿನಾಕಪಾಣಿ ನೇತೃತ್ವದ ನಿಯೋಗದ ಸದಸ್ಯರು, ಖಾಸಗೀಕರಣ ಮಾಡಬಾರದೆಂದು ಮನವಿ ಪತ್ರವನ್ನು ಸಲ್ಲಿಕೆ ಮಾಡಿದರು.

ಸರಕಾರಿ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದು ತಕ್ಷಣ ನಿಲ್ಲಿಸಬೇಕು, ರಕ್ಷಣಾ ಉತ್ಪನ್ನಗಳ ರಂಗದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್‍ಡಿಐ) ಏರಿಕೆ ತಡೆಯಬೇಕು. ಅದೇ ರೀತಿ, ಹಲವು ವರ್ಷಗಳಿಂದ ಗುತ್ತಿಗೆ ನೌಕರನ್ನಾಗಿ ದುಡಿಯುತ್ತಿರುವ ಸಿಬ್ಬಂದಿಯನ್ನು ಖಾಯಂ ಮಾಡಬೇಕು. ಜೊತೆಗೆ ವಲಸೆ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಗೊಳಿಸಬೇಕು ಎಂದು ನಿಯೋಗದ ಸದಸ್ಯರು ಆಗ್ರಹಿಸಿದರು.

ವಿಶೇಷವಾಗಿ ಇಡೀ ದಕ್ಷಿಣ ಭಾರತದ ಬೆಂಗಳೂರಿನಲ್ಲಿರುವ 515 ಭೂಸೇನಾ ಕಾರ್ಯಾಗಾರವು ಏಕೈಕ ರಕ್ಷಣಾ ಕಾರ್ಖಾನೆಯಾಗಿದ್ದು, ಇಲ್ಲಿ ಸಾವಿರಾರು ಕಾರ್ಮಿಕರು ಶ್ರಮವಹಿಸಿ ದುಡಿಯುತ್ತಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆಯ ಕೆಲಸಗಳನ್ನು ಖಾಸಗಿಯವರಿಗೆ ನೀಡಬಾರದೆಂದು  ಅವರು ಒತ್ತಾಯ ಮಾಡಿದರು.

ಖಾಸಗೀಕರಣ ಕುರಿತು ಪ್ರಶ್ನಿಸುವೆ

ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಲ್ಲದೆ, ರಾಜ್ಯಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪಿಸಿ, ಸಂಬಂಧಪಟ್ಟ ಸಚಿವರನ್ನು ಪ್ರಶ್ನೆ ಮಾಡುವೆ, ಕಾರ್ಮಿಕರ ಹಿತ ಕಾಪಾಡುವೆ.

-ಡಾ.ಎಲ್.ಹನುಮಂತಯ್ಯ

ದಕ್ಷಿಣ ಭಾರತದ ಆಸ್ತಿ ಉಳಿಸಿಕೊಳ್ಳಬೇಕು

ಬೆಂಗಳೂರಿನಲ್ಲಿರುವ 515 ಭೂಸೇನಾ ಕಾರ್ಯಾಗಾರವು ವಿಶೇಷವಾಗಿ ಇಡೀ ದಕ್ಷಿಣ ಭಾರತದ ಏಕೈಕ ರಕ್ಷಣಾ ಕಾರ್ಖಾನೆಯಾಗಿದ್ದು, ಇದನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

-ಸಮೀವುಲ್ಲಾಖಾನ್, ಸಂಘದ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News