ಅಮೂಲ್ಯ 'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಪ್ರಕರಣ: ಎನ್‍ಐಎ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ

Update: 2020-07-28 13:28 GMT

ಬೆಂಗಳೂರು, ಜು.28: 'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ವಿರುದ್ಧದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ)ಗೆ ವಹಿಸಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತು ಮಂಡ್ಯ ಮೂಲದ ವಕೀಲ ವಿಶಾಲ್ ರಘು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಎನ್‍ಐಎಗೆ ವಹಿಸುವಷ್ಟು ಈ ಪ್ರಕರಣ ಗಂಭೀರವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.    

ಕೇಂದ್ರ ಸರಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆ.20ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಳು.

ಕೂಡಲೇ ಅಮೂಲ್ಯಳನ್ನು ವಶಕ್ಕೆ ಪಡೆದಿದ್ದ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ ನಿಗದಿತ ಸಮಯದಲ್ಲಿ ಚಾರ್ಜ್ ಶೀಟ್ ಸಲ್ಲಿಸದ ಕಾರಣ ನ್ಯಾಯಾಲಯ ಕಳೆದ ಜೂ.10 ರಂದು ಅಮೂಲ್ಯಗೆ ಜಾಮೀನು ನೀಡಿತ್ತು. ಆ ಬಳಿಕ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಬೇಕೆಂದು ಕೋರಿ ಮಂಡ್ಯದ ವಕೀಲ ವಿಶಾಲ ರಘು ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.

ಕಳೆದ ವಿಚಾರಣೆ ವೇಳೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸುವಂತಹ ವಿಶೇಷತೆ ಏನಿದೆ? ಎಂದು ಹೈಕೋರ್ಟ್ ಅರ್ಜಿದಾರ ಪರ ವಕೀಲರನ್ನು ಪ್ರಶ್ನೆ ಮಾಡಿತ್ತು. 'ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ನಿಗದಿತ 90 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ ಆರೋಪಿಗೆ ಜಾಮೀನು ಸಿಕ್ಕಿದೆ' ಎಂದು ಅರ್ಜಿದಾರರ ಪರ ವಕೀಲ ಪವನ್ ಚಂದ್ರ ಶೆಟ್ಟಿ ವಾದಿಸಿದ್ದರು.

ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದ ಪ್ರಕರಣ ಇದೊಂದು ಮಾತ್ರವೇ? ಇಂತಹ ಪ್ರಕರಣಗಳು ಸಾಕಷ್ಟಿವೆ ಎಂದಿತ್ತು. ಇನ್ನು, 90 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಆರೋಪಿಗೆ ಸಿಕ್ಕಿರುವ ಜಾಮೀನು ರದ್ದು ಮಾಡಲು ಆಗುತ್ತದೆಯೇ ಎಂದು ಮರು ಪ್ರಶ್ನೆ ಮಾಡಿತ್ತು.

ನ್ಯಾಯಮೂರ್ತಿಗಳ ಈ ಪ್ರಶ್ನೆಗೆ 'ದೇಶದ ವಿರುದ್ಧ ಘೋಷಣೆ ಕೂಗಿದ್ದರಿಂದ ಪ್ರಕರಣವು ಗಂಭೀರ ಸ್ವರೂಪದ್ದಾಗಿದೆ' ಎಂದು ವಕೀಲರು ಉತ್ತರಿಸಿದ್ದರು. ಈ ಉತ್ತರಕ್ಕೆ ಪುನಃ ಪ್ರತಿಕ್ರಿಯಿಸಿದ ಪೀಠ, ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಜಾಮೀನು ಪಡೆಯುವ ಹಕ್ಕು ಆರೋಪಿಗೆ ಸಹಜವಾಗಿ ಸಿಗುತ್ತದೆ. ಈ ಜಾಮೀನು ರದ್ದುಪಡಿಸಲು ಯಾವ ಕಾನೂನು ಹೇಳುತ್ತದೆ ಎಂದು ಪ್ರಶ್ನಿಸಿತ್ತು. ಆ ಬಳಿಕ ಎರಡು ಬಾರಿ ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ಈ ಅಂಶವನ್ನು ಸಹ ಹೈಕೋರ್ಟ್ ಉಲ್ಲೇಖ ಮಾಡಿ ಮೇಲಿನ ತೀರ್ಪು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News