ಬೆಂಗಳೂರಿನಲ್ಲಿಂದು 1,898 ಮಂದಿಗೆ ಕೊರೋನ ಸೋಂಕು: 40 ಮಂದಿ ಸಾವು
ಬೆಂಗಳೂರು, ಜು.28: ನಗರದಲ್ಲಿ ಮಂಗಳವಾರ ಒಂದೇ ದಿನ 1,898 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 40 ಜನರು ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 48,821 ಕೊರೋನ ಸೋಂಕಿತರು ಧೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 957 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ ಇಲ್ಲಿಯವರೆಗೆ 12,761 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 35,102 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರಚಿಕಿತ್ಸಾಲಯಲ್ಲಿ ಒಟ್ಟು 44,438 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ತಂದೆಗೆ ಚಿಕಿತ್ಸೆ ಕೊಡಿಸಲು ಮಗ ಪರದಾಟ: ಕೊರೋನ ಸೋಂಕು ಇಲ್ಲದಿದ್ದರೂ ರಕ್ತದೊತ್ತಡದಿಂದ ನರಳುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕಿದ ಹಿನ್ನೆಲೆ ತಂದೆಯನ್ನು ಉಳಿಸಿಕೊಳ್ಳಲು ಮಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾನೆ ಎನ್ನಲಾಗಿದೆ.
ಜಾಲಹಳ್ಳಿ ಕ್ರಾಸ್‍ನ 58 ವರ್ಷದ ವ್ಯಕ್ತಿಗೆ ಕೊರೋನ ಇಲ್ಲದಿದ್ದರೂ ಕೋವಿಡ್ ವರದಿ ಇಲ್ಲ ಎಂಬ ಕಾರಣ ಹೇಳಿ ಯಾವುದೇ ಆಸ್ಪತ್ರೆಯೂ ಚಿಕಿತ್ಸೆ ನೀಡಲು ಮುಂದಾಗಿಲ್ಲ ಎನ್ನಲಾಗಿದ್ದು, ತಂದೆಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡಿದರು ಯಾವುದೇ ಆಸ್ಪತ್ರೆ ಸಿಗಲಿಲ್ಲ. ಈ ವೇಳೆ ತಂದೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತುರ್ತಾಗಿ ವೆಂಟಿಲೇಟರ್ ಅವಶ್ಯಕತೆ ಇದ್ದು, ಯಾವೊಂದು ಆಸ್ಪತ್ರೆಯೂ ಚಿಕಿತ್ಸೆ ನೀಡಲು ಮುಂದಾಗುತ್ತಿಲ್ಲ ಎಂದು ಆ ವ್ಯಕ್ತಿಯ ಮಗ ತಮ್ಮ ಅಳಲನ್ನು ವಿಡಿಯೋ ಮೂಲಕ ತೋಡಿಕೊಂಡಿದ್ದಾರೆ.
ಶೇ.50ರಷ್ಟು ಸಿಬ್ಬಂದಿ ಬಳಕೆ: ನಗರದ ಜನನಿಬೀಡ ಪ್ರದೇಶಗಳಲ್ಲಿ ಜನರದಟ್ಟಣೆ ಕಡಿಮೆ ಮಾಡಲು ವಾಣಿಜ್ಯ ಮಳಿಗೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬಿಬಿಎಂಪಿಯ ಈ ಆದೇಶ ಟೌನ್‍ಹಾಲ್ ಸರ್ಕಲ್, ಜೆ.ಸಿ. ರಸ್ತೆ, ಎ.ಎಂ. ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಕೆ.ಅರ್. ಮಾರುಕಟ್ಟೆ ಜಂಕ್ಷನ್, ಟಿಪ್ಪುಸುಲ್ತಾನ್ ಅರಮನೆ ರಸ್ತೆ, ಬಾಷ್ಯಾಂರಸ್ತೆ, ಶ್ರೀನಿವಾಸ ಮಂದಿರ ರಸ್ತೆ, ಆಂಜನೇಯ ದೇವಸ್ಥಾನ ರಸ್ತೆ, ಎಸ್‍ಪಿಜೆ ರಸ್ತೆ ವಾಣಿಜ್ಯ ಮಳಿಗೆಗಳಿಗೆ ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಬಿಬಿಎಂಪಿ ಸೂಚನೆ ನೀಡಿದೆ.