500 ವಿಕೆಟ್‌ಗಳ ಮೆಲುಗಲ್ಲು ತಲುಪಿದ ಸ್ಟುವರ್ಟ್ ಬ್ರಾಡ್

Update: 2020-07-29 05:15 GMT

ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನ ಅಂತಿಮ ದಿನ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ 500ನೇ ಟೆಸ್ಟ್ ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದಾರೆ.

ಎರಡನೇ ಇನಿಂಗ್ಸ್‌ನ 13.3ನೇ ಓವರ್‌ನಲ್ಲಿ ಬ್ರಾಡ್ ಈ ಮೈಲಿಗಲ್ಲು ತಲುಪಿದರು. ವೆಸ್ಟ್ ಇಂಡೀಸ್‌ನ ಆರಂಭಿಕ ಬ್ರಾಥ್‌ವೈಟ್(19) ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವ ಮೂಲಕ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಳಿಸಿದ ದಾಖಲೆ ಬರೆದರು.

 ಬ್ರಾಥ್‌ವೈಟ್ ಅವರ ಹೊಸ ಚೆಂಡು ಪಾಲುದಾರ ಜೇಮ್ಸ್ ಆ್ಯಂಡರ್ಸನ್ ಅವರು ಕೂಡಾ ಕಳೆದ ವರ್ಷ ಬ್ರಾಥ್‌ವೈಟ್ ವಿಕೆಟ್ ಉಡಾಯಿಸುವ ಮೂಲಕ 500ನೇ ಟೆಸ್ಟ್ ವಿಕೆಟ್ ಪೂರೈಸಿದ್ದರು ಎನ್ನುವುದು ವಿಶೇಷ.

  ಬ್ರಾಡ್ 500 ಟೆಸ್ಟ್ ವಿಕೆಟ್ ಪಡೆದ ವಿಶ್ವದ ಏಳನೇ ಬೌಲರ್ ಆಗಿದ್ದಾರೆ. ಇಂಗ್ಲೆಂಡ್‌ನ ಎರಡನೇ ಬೌಲರ್. ಆ್ಯಂಡರ್ಸನ್ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಬೌಲರ್. 800 ವಿಕೆಟ್ ಪಡೆದ ಮುತ್ತಯ್ಯ ಮುರಳೀ ಧರನ್ ಟೆಸ್ಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಬ್ರಾಡ್ ಪಾಲಿಗೆ 140ನೇ ಟೆಸ್ಟ್ ಆಗಿದೆ. ವೇಗಿ 121 ಏಕದಿನ ಮತ್ತು 56 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

    ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ಬ್ರಾಡ್ ಅವರನ್ನು ಅಂತಿಮ ಹನ್ನೊಂದರ ತಂಡದಿಂದ ಕೈಬಿಡಲಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತಿದೆ. ಎರಡನೇ ಟೆಸ್ಟ್‌ನಲ್ಲಿ ತಂಡಕ್ಕೆ ವಾಪಸಾಗಿ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 6 ವಿಕೆಟ್ ಪಡೆದಿದ್ದರು. ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಬ್ರಾಡ್ ಕಬಳಿಸಿದ್ದರು.

 ಬ್ರಾಡ್ 600 ವಿಕೆಟ್ ಗಳಿಸುವ ಗುರಿ ಹೊಂದಿರಬೇಕು ಎಂದು ಮಾಜಿ ಆರಂಭಿಕ ಆಟಗಾರ ಮೈಕೆಲ್ ಅಥರ್ಟನ್ ಹೇಳಿದ್ದಾರೆ. ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ 800 ವಿಕೆಟ್‌ಗಳೊಂದಿಗೆ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದರೆ, ಶೇನ್ ವಾರ್ನ್ (708) ಮತ್ತು ಅನಿಲ್ ಕುಂಬ್ಳೆ (619) ನಂತರದ ಸ್ಥಾನದಲ್ಲಿದ್ದಾರೆ.

ಬ್ರಾಡ್ ಅವರ ಸಹ ಆಟಗಾರ ಆ್ಯಂಡರ್ಸನ್ 600 ಪಡೆಯುವ ಹಾದಿಯಲ್ಲಿದ್ದಾರೆ. ಅವರು ಈ ವರೆಗೆ 589 ವಿಕೆಟ್ ಗಳಿಸಿದ್ದಾರೆ. ಗ್ಲೆನ್ ಮೆಕ್‌ಗ್ರಾತ್ 563 ಮತ್ತು ಕರ್ಟ್ನಿ ವಾಲ್ಶ್ 519 ವಿಕೆಟ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News