×
Ad

ಬೆಂಗಳೂರು ಲೈಫ್ ಸೈನ್ಸಸ್ ಪಾರ್ಕ್’ಗೆ ಶಿಲಾನ್ಯಾಸ ನೆರವೇರಿಸಿದ ಸಿಎಂ

Update: 2020-07-29 13:49 IST

ಬೆಂಗಳೂರು, ಜು.29: ರಾಜ್ಯದ ಆರ್ಥಿಕತೆಯ ಶಕ್ತಿಯಾಗಿರುವ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಎಲ್ಲ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲಾಗುವುದು ಹಾಗೂ ಕರ್ನಾಟಕವು ಜಾಗತಿಕ ’ಬಿಟಿ ಹಬ್ ಆಗಿ ಹೊರಹೊಮ್ಮುವುದಕ್ಕೆ ಬೇಕಾದ ಸರ್ವ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ’ಬೆಂಗಳೂರು ಲೈಫ್ ಸೈನ್ಸಸ್ ಪಾರ್ಕ್’ಗೆ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳೆರಡೂ ಬಹಳ ಮುಖ್ಯವಾದವು. ಆರ್ಥಿಕತೆ, ಉದ್ಯೋಗ ಸೃಷ್ಟಿಯಲ್ಲಿ ಇವೆರಡೂ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹೀಗಾಗಿ ಈ ಎರಡೂ ಕ್ಷೇತ್ರಗಳಿಗೆ ಸರಕಾರ ಮಹತ್ವ ನೀಡಲಿದೆ ಎಂದು ನುಡಿದರು.

ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದು ಕೈಗಾರಿಕೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಿಗೆ ಹೆಚ್ಚು ಮನ್ನಣೆ ನೀಡಲಾಗುವುದು ಎಂದು ಸಿಎಂ ಒತ್ತಿ ಹೇಳಿದರು.

’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪರಿಧಿಯನ್ನು ಮತ್ತಷ್ಟು ವಿಸ್ತಾರಗೊಳಿಸಲಿದೆ. ದೇಶದ ಬಿಟಿ ರಾಜಧಾನಿ ಆಗಿರುವ ಬೆಂಗಳೂರು ನಗರಕ್ಕೆ ಈ ಪಾರ್ಕ್ ಅನನ್ಯ ಕೊಡುಗೆ ನೀಡುವ ವಿಶ್ವಾಸ ನನಗಿದೆ. ಸರಕಾರವೂ ಈ ಯೋಜನೆಗೆ 150 ಕೋಟಿ ರೂ. ಅನುದಾನ ನೀಡಿದೆ. 150ಕ್ಕೂ ಹೆಚ್ಚು ಕಂಪನಿಗಳು ಈ ಪಾರ್ಕ್ ನಲ್ಲಿ ನೆಲೆಗೊಳ್ಳಲಿವೆ. 100ಕ್ಕೂ ಹೆಚ್ಚು ನವೋದ್ಯಮಗಳು ಸ್ಥಾಪನೆಯಾಗಲಿವೆ. ಇದರಿಂದ 50,000ಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಕೆಲಸ ಸಿಗಲಿದೆ. ರಾಜ್ಯದ ಅರ್ಥವ್ಯವಸ್ಥೆಗೆ ಈ ಯೋಜನೆ ಮಹತ್ವದ ಕಾಣಿಕೆ ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು. 

ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಸಾಧನೆಯನ್ನೇ ಮಾಡಿದೆ. ಸದ್ಯಕ್ಕೆ ರಾಜ್ಯದಲ್ಲಿ 380 ಕಂಪೆನಿಗಳು, 200ಕ್ಕೂ ಹೆಚ್ಚು ನವೋದ್ಯಮಗಳು ಇದರಲ್ಲಿ ತೊಡಗಿಕೊಂಡಿವೆ. ಏಷ್ಯಾದಲ್ಲಿ ಶೇ.9ರಷ್ಟು, ಭಾರತದಲ್ಲಿ ಶೇ.35ರಷ್ಟು ಮಾರುಕಟ್ಟೆ ಪಾಲನ್ನು ನಾವು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಗಣನೀಯವಾಗಿ ಹೆಚ್ಚಾಗಬೇಕು. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರಕಾರ ಸಿದ್ಧವಿದೆ ಎಂದು ಅವರು ಪ್ರಕಟಿಸಿದರು.

ಎರಡು ದಶಕಗಳ ಕನಸು:

ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಸಾಕಾರವಾಗುವ ಸಮಯ ಬಂದಿದೆ. ಈಗಾಗಲೇ ಪ್ರಬಲವಾಗಿ ಹೊರಹೊಮ್ಮಿರುವ ರಾಜ್ಯ ಬಿಟಿ ಕ್ಷೇತ್ರಕ್ಕೆ ಈ ಪಾರ್ಕ್ ಮೂಲಕ ಮತ್ತಷ್ಟು ಬಲ ಬರಲಿದೆ. ಸರಕಾರದ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗುತ್ತಿದೆ. ಸಂಶೋಧನೆ, ಅಭಿವೃದ್ಧಿ ಎಲ್ಲವೂ ಒಂದೇ ಸೂರಿನ ಅಡಿಯಲ್ಲಿ ಆಗಲಿದೆ. ಈ ಯೋಜನೆ ಸಾಕಾರಗೊಂಡ ಮೇಲೆ ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಪ್ರತಿಷ್ಠೆ ಮತ್ತಷ್ಟು ಹೆಚ್ಚಲಿದೆ ಎಂದರು. 

ಸಂಶೋಧನೆ ಮತ್ತು ಹೊಸ ಅವಿಷ್ಕಾರಗಳಿಗಿದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ. ’ಕರ್ನಾಟಕ ಇನೋವೆಷನ್ ಅಥಾರಿಟ”ಯನ್ನು ಸ್ಥಾಪಿಸಲಾಗಿದೆ. ’ಇನ್’ವೆಸ್ಟ್ ಕರ್ನಾಟಕ ಮೂಲಕ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿ ಸಲಾಗಿದೆ. ದೇಶದ ಯಾವುದೇ ರಾಜ್ಯವೂ ಕೈಕೊಳ್ಳದಂತಹ ಪರಿಣಾಮಕಾರಿ ಕ್ರಮಗಳನ್ನು ಯಡಿಯೂರಪ್ಪ ನೇತೃತ್ವದ ಸರಕಾರ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಶಾಸಕ ಎಂ.ಕೃಷ್ಣಪ್ಪ ಮಾತನಾಡಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ, ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್ ಯೋಜನೆಯ ಮಾಹಿತಿ ನೀಡಿದರು. ಕರ್ನಾಟಕ ಕೈಗಾರಿಕಾ ತಾಂತ್ರಿಕ ಸಂಸ್ಥೆಯ ನಿರ್ದೇಶಕಿ ಮೀನಾ ನಾಗರಾಜ್  ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News