ಬೆಂಗಳೂರು: ಚಿತ್ರಮಂದಿರ ಬಳಿಯ ಕಟ್ಟಡ ಕುಸಿತ; ಸ್ಥಳಕ್ಕೆ ಮೇಯರ್ ಭೇಟಿ

Update: 2020-07-29 13:40 GMT

ಬೆಂಗಳೂರು, ಜು.29: ಗಾಂಧಿನಗರದ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ ಕಪಾಲಿ ಚಿತ್ರಮಂದಿರ ಬಳಿ ಮಂಗಳವಾರ ರಾತ್ರಿ ಕಟ್ಟಡ ಕುಸಿದು ಬಿದ್ದಿರುವ ಸ್ಥಳಕ್ಕೆ ಮೇಯರ್ ಗೌತಮ್ ಕುಮಾರ್ ಭೇಟಿ ನೀಡಿ ತಪಾಸಣೆ ನಡೆಸಿದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಟ್ಟಡ ಬಿದ್ದಿರುವ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತನಿಖೆ ಆದಮೇಲೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಟ್ಟಡ ಕುಸಿದಿರಿವ ಹಿನ್ನೆಲೆ ಈಗಾಗಲೇ ಭೂಮಾಲಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಕಟ್ಟಡ ಕುಸಿದಿರುವ ಬಗ್ಗೆ ನಗರ ಯೋಜನೆ ವಿಭಾಗದ ವಿಶೇಷ ಆಯುಕ್ತರು ರವರಿಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

2018ರಲ್ಲಿ ಕಟ್ಟಡಕ್ಕೆ ಪ್ಲಾನಿಂಗ್ ಅಪ್ರೂವಲ್ ನೀಡಲಾಗಿತ್ತು. ಅದನ್ನು ಈಗ ತಡೆ ಹಿಡಿಯಲಾಗಿದೆ. ಅಧಿಕಾರಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕಟ್ಟಡ ಕುಸಿದ ಅಕ್ಕಪಕ್ಕದ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. ಕೆಲವೊಂದು ಅಪಾಯದಲ್ಲಿರುವ ಮನೆಗಳನ್ನು ಗುರುತಿಸಿ, ಅಲ್ಲಿ ನೆಲೆಸಿರುವವರನ್ನು ಕೂಡಲೇ ಖಾಲಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಟ್ಟಡ ನಿರ್ಮಿಸಲು ಎಷ್ಟು ಆಳ ಅಗೆಯಲಾಗಿದೆ, ಅನುಮತಿ ಎಷ್ಟಕ್ಕೆ ಪಡೆಯಲಾಗಿತ್ತು ಎಂಬ ಸಂಪೂರ್ಣ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕಪಾಲಿ ಚಿತ್ರಮಂದಿರ ತೆರವಾದ ಬಳಿಕ ಆ ಜಾಗದಲ್ಲಿ ಕಟ್ಟಡ ಕಟ್ಟಲು ಪಾಯ ತೆಗೆಯಲಾಗಿದೆ. ಕಟ್ಟಡ ನಿರ್ಮಾಣ ಮಾಡುವ ಮೊದಲು ನಾಲ್ಕು ಕಡೆ ತಡೆಗೋಡೆ ನಿರ್ಮಾಣ ಮಾಡಬೇಕು. ಅದರೆ, ಮೂರು ಕಡೆ ನಿರ್ಮಾಣ ಮಾಡಿದ್ದಾರೆ. ತಡೆಗೋಡೆ ನಿರ್ಮಾಣ ಮಾಡದ ಕಾರಣ ಪಕ್ಕದ ಕಟ್ಟಡ ಕುಸಿದಿದೆ. ಈ ಸಂಬಂಧ ವಿಶೆಷ ಆಯುಕ್ತರು(ಯೋಜನೆ) ರವರ ನೇತೃತ್ವದಲ್ಲಿ ಪಾಲಿಕೆ ವತಿಯಿಂದ ಏನು ಪ್ಲಾನ್ ಕೊಟ್ಟಿದ್ದೇವೆ, ಬೇಸ್ ಮೆಂಟ್ ಎಷ್ಟು ಅಗೆದಿದ್ದಾರೆ ಎಂಬುದನ್ನು ತನಿಖೆ ಮಾಡಿ ವರದಿ ನೀಡಲು ಸೂಚನೆ ನೀಡಲಾಗಿದೆ.

ಈಗಾಗಲೇ ಮಾಲಕರ ವಿರುದ್ದ ಎಫ್‍ಐಆರ್ ದಾಖಲಿಸಿ ಕ್ರಿಮಿನಲ್ ಕೇಸ್ ಹಾಕಲಾಗಿದೆ. ಕಟ್ಟಡದ ಪ್ಲಾನ್ ಅನ್ನು ತಕ್ಷಣದಿಂದ ರದ್ದುಗೊಳಿಸುತ್ತೇವೆ. ಈಗ ಬಿದ್ದಿರೋ ಕಟ್ಟಡದವರಿಗೆ ಪರಿಹಾರವನ್ನು ಭೂಮಾಲಕರು ನೀಡಬೇಕು. ಎಷ್ಟು ಹಾನಿಯಾಗಿದೆ ಎಂಬುದನ್ನು ಪಾಲಿಕೆಯಿಂದ ಅಂದಾಜಿಸಿ ಹಾನಿಗೊಳಗಾದವರಿಗೆ ಭೂಮಾಲಕರಿಂದ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News