ಕಂಟೋನ್ಮೆಂಟ್ ರೈಲ್ವೇ ನಿಲ್ದಾಣಕ್ಕೆ ಜಾಫರ್ ಶರೀಫ್ ಹೆಸರಿಡಲು ಬಿಬಿಎಂಪಿ ಒಪ್ಪಿಗೆ

Update: 2020-07-29 14:55 GMT
ಸಿ.ಕೆ.ಜಾಫರ್ ಶರೀಫ್

ಬೆಂಗಳೂರು, ಜು.29: ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ಸ್ಮರಣಾರ್ಥ ನಗರದ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣಕ್ಕೆ ಅವರ ಹೆಸರಿಡಲು ಬಿಬಿಎಂಪಿ ಅಧಿಕೃತವಾಗಿ ಒಪ್ಪಿಗೆ ನೀಡಿದೆ ಎಂದು ಪಾಲಿಕೆ ವಿರೋಧ ಪಕ್ಷದ ಕಾಂಗ್ರೆಸ್ ನಾಯಕ ಅಬ್ದುಲ್ ವಾಜೀದ್ ತಿಳಿಸಿದರು.

ಬುಧವಾರ ಇಲ್ಲಿನ ಆರ್‍ಟಿ ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸಿ.ಕೆ.ಜಾಫರ್ ಶರೀಫ್ ಅವರ ಹೆಸರನ್ನಿಡಲು ಅಂಗೀಕರಿಸಲಾಗಿದೆ. ಇನ್ನು, ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರಕ್ರಿಯೆ ಬಾಕಿ ಉಳಿದಿದ್ದು, ಪಕ್ಷಬೇಧ ಮರೆತು ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸೋಣ ಎಂದರು.

ದೇಶದ ರೈಲ್ವೆ ಮಾರ್ಗ ಅಭಿವೃದ್ಧಿ, ಗೇಜ್ ಪರಿವರ್ತನೆ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದರು. ಅಷ್ಟೇ ಅಲ್ಲದೆ, ಯಲಹಂಕ ರೈಲ್ವೆ ನಿಲ್ದಾಣದ ಸಮೀಪ ಇರುವ ರೈಲು ಮತ್ತು ಗಾಲಿ ಕಾರ್ಖಾನೆ ಸ್ಥಾಪನೆಯಾಗಲು ಜಾಫರ್ ಶರೀಫ್ ಶ್ರಮಿಸಿದ್ದಾರೆ ಎಂದರು.

ಈ ಮೊದಲು ಸಿ.ಕೆ.ಜಾಫರ್ ಶರೀಫ್ ಅವರ ಹೆಸರನ್ನು ನಗರದ ಕ್ವೀನ್ಸ್ ರಸ್ತೆಗೆ ನಾಮಕರಣ ಮಾಡಲಾಗಿದೆ ಎಂದ ಅವರು, ಹಿಂದಿನ ವಾರ್ಷಿಕ ಸಾಲಿನ ಡಿಸೆಂಬರ್ ಮಾಸದಲ್ಲಿಯೇ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಈ ವಿಷಯ ನಿರ್ಣಯಿಸಲಾಯಿತು. ತದನಂತರ, ಆಕ್ಷೇಪಣೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ದೂರುಗಳು ಕೇಳಿಬಾರದ ಹಿನ್ನೆಲೆ, ಇದೀಗ ಅಧಿಕೃತವಾಗಿ ಸಿ.ಕೆ.ಜಾಫರ್ ಶರೀಫ್ ಹೆಸರಿಡಲು ಸಮ್ಮತಿಸಲಾಗಿದೆ ಎಂದು ಅವರು ವಿವತರಿಸಿದರು.

ಕೊರೋನ ಸೋಂಕಿನ ಸಂಬಂಧ ದೇಶದೆಲ್ಲೆಡೆ ಗುಣಾಮುಖರಾದವರ ಪ್ರಮಾಣ ಏರಿಕೆ ಕಂಡಿದೆ. ಆದರೆ, ಕರ್ನಾಟಕ ಅದರಲ್ಲೂ ಬೆಂಗಳೂರಿನಲ್ಲಿ ಗುಣಾಮುಖರಾದವರ ಸಂಖ್ಯೆ ತೀರ ಕಡಿಮೆಯಾಗಿದೆ. ಈ ಬಗ್ಗೆ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ವಾಜೀದ್, ಬಿಬಿಎಂಪಿ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News