×
Ad

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ; ಒಟ್ಟು 987 ಮಂದಿ ಮೃತ್ಯು

Update: 2020-07-29 20:30 IST

ಬೆಂಗಳೂರು, ಜು.29: ನಗರದಲ್ಲಿ ಬುಧವಾರ ಒಂದೇ ದಿನ 2,270 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 30 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 51,091 ಸೋಂಕಿತರು ಧೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 987 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ, ಒಟ್ಟು 13,879 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 36,224 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 46,996 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಸೋಂಕಿಗೆ ವಾರಿಯರ್ ಮೃತ: ನಗರದ ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಬುಧವಾರ ಕೊರೋನದಿಂದ ಸಾವನ್ನಪ್ಪಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಪಿಪಿಇ ಕಿಟ್: ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ ಲಭ್ಯವಿರಲಿದ್ದು, ಡಿಜಿಟಲ್ ಬ್ಯಾಂಕಿಂಗ್ ಮೂಲಕ ಮಾತ್ರ ಹಣ ಪಾವತಿ ಮಾಡಿ ಖರೀದಿಸಬಹುದಾಗಿದೆ. ನೈಋತ್ಯ ರೈಲ್ವೆಯು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್‍ ಅನ್ನು ವೆಂಡಿಂಗ್ ಯಂತ್ರದ ಮೂಲಕ ಮಾರಾಟ ಮಾಡುತ್ತಿದೆ. ರೈಲ್ವೆ ನಿಲ್ದಾಣದಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಆರೋಗ್ಯದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಹೆಚ್ಚಳ

ಮಂಗಳವಾರದ ವರದಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೊರೋನ ಸೋಂಕು ಸಕ್ರಿಯ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 12,781ಕ್ಕೆ ಏರಿದೆ. ಒಟ್ಟಾರೆ 21,873 ಝೋನ್ ಗುರುತಿಸಲಾಗಿದೆ. ಈ ಪೈಕಿ ಬೆಂಗಳೂರಿನ 1267 ವಸತಿ ಸಮುಚ್ಚಯಗಳು ಸೇರಿವೆ. ಈಗಲೂ ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 3,935, ಬೆಂಗಳೂರು ಪೂರ್ವ ವಲಯ 2,256, ಬೆಂಗಳೂರು ಪಶ್ಚಿಮ 1,770, ಬೊಮ್ಮನಹಳ್ಳಿ 1548, ರಾಜರಾಜೇಶ್ವರಿ ನಗರ 1124, ಮಹದೇವಪುರ 937, ಯಲಹಂಕ 437 ಹಾಗೂ ದಾಸರಹಳ್ಳಿ 318 ಸಕ್ರಿಯ ಕಂಟೈನ್ಮೆಂಟ್ ಝೋನ್‍ಗಳಿವೆ.

ಕಮಾಂಡ್ ಸೆಂಟರ್ ಗೆ ಮೇಯರ್ ಭೇಟಿ

ನಗರದ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಕೋವಿಡ್-19 ಕಮಾಂಡ್ ಸೆಂಟರ್ ಹಾಗೂ ಆರ್.ಆರ್ ನಗರ ಕೋವಿಡ್-19 ಕಮಾಂಡ್ ಸೆಂಟರ್ ಗೆ ಮೇಯರ್ ಗೌತಮ್‍ ಕುಮಾರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿದರು.

ಈ ಮೇಳೆ ಮಾತಾಡಿದ ಅವರು, ದಾಸರಹಳ್ಳಿ ವಲಯದಲ್ಲಿರುವ ಕೋವಿಡ್ ಪ್ರಕರಣಗಳು, ಹೋಂ ಐಸೊಲೇಶನ್, ಪ್ರಥಮ ಸಂಪರ್ಕಿತರು, ದ್ವಿತೀಯ ಸಂಪರ್ಕಿತರು, ಕಂಟೈನ್ಮೆಂಟ್ ಪ್ರದೇಶ, ಆ್ಯಂಬುಲೆನ್ಸ್ ಹಾಗೂ ಮೃತದೇಹಗಳನ್ನು ಸಾಗಿಸುವ ವಾಹನ, ಫೀವರ್ ಕ್ಲಿನಿಕ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಅಗತ್ಯ ಸೂಚನೆ ನೀಡಿದರು.

ಕಂಟ್ರೋಲ್‍ ರೂಂನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಜೊತೆ ಕೆಲ ಕಾಲ ಚರ್ಚಿಸಿ, ಕೋವಿಡ್ ಸೋಂಕಿತರೊಡನೆ ಯಾವ ರೀತಿ ನಡೆದುಕೊಳ್ಳಬೇಕು. ನೀವು ಅವರಿಗೆ ಕರೆ ಮಾಡಿದಾಗ ಭಯಪಡದಿರಲು ತಿಳಿಸಬೇಕು. ಆಗಾಗ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಪಲ್ಸ್ ಆಕ್ಸಿಮೀಟರ್ ನಲ್ಲಿ ಸ್ವಯಂ ತಪಾಸಣೆ ಮಾಡಿಕೊಳ್ಳಲು ತಿಳಿ ಹೇಳಬೇಕು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಸೇವನೆ ಮಾಡಲು ತಿಳಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News