ಬೆಂಗಳೂರು: ರಾಜಕಾಲುವೆಗೆ ಬಿದ್ದ ಮಗು; 20 ದಿನವಾದರೂ ಸಿಗದ ಸುಳಿವು
ಬೆಂಗಳೂರು, ಜು.29: ನಗರದಲ್ಲಿ ರಾಜಕಾಲುವೆಗೆ ಬಿದ್ದ ಬಾಲಕಿಯ ಸುಳಿವು 20 ದಿನಗಳಾದರೂ ಸಿಗದ ಹಿನ್ನೆಲೆ ಕಂಗಾಲಾಗಿರುವ ಮಗುವಿನ ಪೋಷಕರು ಮಗು ಹುಡುಕುವುದಕ್ಕೆ ಆಗುತ್ತಾ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ.
ಜು.10ರಂದು ಅಸ್ಸಾಂ ಮೂಲದ ಮೊನಾಲಿಕಾ ಎಂಬ 6 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆಯತಪ್ಪಿ ಮಾರತಹಳ್ಳಿಯ ರಾಜಕಾಲುವೆಯಲ್ಲಿ ಬಿದ್ದಿದ್ದಳು. ನಾಲ್ಕು ದಿನಗಳ ಕಾಲ ಹುಡುಕಾಟ ನಡೆಸಿದರೂ ಮಗು ಸಿಗದ ಹಿನ್ನೆಲೆ ಎನ್.ಡಿ.ಆರ್.ಎಫ್ ತಂಡ ಶೋಧ ಕಾರ್ಯವನ್ನು ನಿಲ್ಲಿಸಿತ್ತು. ಮೂರು ದಿನಗಳಲ್ಲಿ ದೇಹ ನೀರಿನಲ್ಲಿ ತೇಲುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಅದು ಸುಳ್ಳಾಗಿದ್ದು, ಕಾಲುವೆ ಮೂಲಕ ತಮಿಳುನಾಡಿಗೆ ಮಗು ಕೊಚ್ಚಿಹೋಗಿರಬಹುದು ಎಂದು ಅಂದಾಜಿಸಲಾಗಿತ್ತು. ಸದ್ಯ ಮಗು ಎಲ್ಲಿ ಹೋಗಿದೆ ಎಂದು ಪೊಲೀಸರಿಗೆ, ಅಗ್ನಿ ಶಾಮಕದಳ ಹಾಗೂ ಎನ್.ಡಿ.ಆರ್.ಎಫ್ ತಂಡಕ್ಕೂ ಗೊತ್ತಿಲ್ಲ. ಹೀಗಾಗಿ ಕಾರ್ಯಾಚರಣೆ ನಡೆಸದೆ ಸುಮ್ಮನಾಗಿದೆ.
ಸದ್ಯ ಬಾಲಕಿಯ ಪೋಷಕರು ಊರಿಗೆ ಹೋಗಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ನಾವು ಊರಿಗೆ ಹೋಗಬೇಕು, ಮಗು ಹುಡುಕುವುದಕ್ಕೆ ಆಗುತ್ತಾ? ನಮಗೆ ಅದರ ಬಗ್ಗೆ ದಯವಿಟ್ಟು ಮಾಹಿತಿ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ತಮಿಳುನಾಡಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.