ರಾಜ್ಯಗಳಿಗೆ ಜಿಎಸ್‍ಟಿ ತೆರಿಗೆ ಬಾಕಿ ಪಾವತಿಸುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ: ಕೇಂದ್ರ ಹಣಕಾಸು ಕಾರ್ಯದರ್ಶಿ

Update: 2020-07-30 04:10 GMT
ಅಜಯ್ ಭೂಷಣ್ ಪಾಂಡೆ

ಹೊಸದಿಲ್ಲಿ: ರಾಜ್ಯಗಳಿಗೆ ಬಾಕಿ ಇರುವ ಜಿಎಸ್‍ಟಿ ತೆರಿಗೆ ಪಾಲಿನ ಬಾಕಿಯನ್ನು ಪಾವತಿಸುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ ಎಂದು ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಸಂಸದೀಯ ಸ್ಥಾಯಿ ಸಮಿತಿ ಮುಂದೆ ತಿಳಿಸಿದ್ದಾರೆ.

ಬಿಜೆಪಿ ಸಂಸದ ಜಯಂತ್ ಸಿನ್ಹಾ ನೇತೃತ್ವದ ಸಮಿತಿಯ ಸಭೆಯಲ್ಲಿ ಹಣಕಾಸು ಕಾರ್ಯದರ್ಶಿ ಈ ಅಸಹಾಯಕತೆ ವ್ಯಕ್ತಪಡಿಸಿದರು. ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಆದಾಯ ಕೊರತೆ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಂಡೆ ಈ ಅಂಶವನ್ನು ಬಹಿರಂಗಪಡಿಸಿದ್ದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರಿಬ್ಬರು ದೃಢಪಡಿಸಿದ್ದಾರೆ.

ರಾಜ್ಯಗಳಿಗೆ ನೀಡಬೇಕಾಗಿರುವ ಬಾಕಿಯನ್ನು ಕೇಂದ್ರ ಸರ್ಕಾರ ಹೇಗೆ ಹೊಂದಿಸುತ್ತದೆ ಎಂದು ಸದಸ್ಯರು ಪ್ರಶ್ನಿಸಿದರು. ಜಿಎಸ್‍ಟಿ ಕಾಯ್ದೆ ಅನ್ವಯ, ನಿರ್ದಿಷ್ಟ ಮಟ್ಟದಿಂದ ರಾಜ್ಯ ಸರ್ಕಾರಗಳ ತೆರಿಗೆ ಸಂಗ್ರಹ ಕಡಿಮೆಯಾದರೆ ಮಾತ್ರ ಪರಿಹಾರ ಮೊತ್ತವನ್ನು ರಾಜ್ಯಗಳಿಗೆ ಪಾವತಿಸಬೇಕಾಗುತ್ತದೆ ಎಂದು ಪಾಂಡೆ ವಿವರಿಸಿದ್ದಾಗಿ ಸದಸ್ಯರು ಹೇಳಿದ್ದಾರೆ.

2019-20ನೇ ಹಣಕಾಸು ವರ್ಷಕ್ಕೆ ಅಂತಿಮ ಕಂತಾಗಿ ಹಣಕಾಸು ಸಚಿವಾಲಯ 13806 ಕೋಟಿ ರೂಪಾಯಿ ಜಿಎಸ್‍ಟಿ ಪರಿಹಾರವನ್ನು ಬಿಡುಗಡೆ ಮಾಡಿದೆ.

ರಾಜ್ಯಗಳಿಗೆ ತೆರಿಗೆ ಪರಿಹಾರ ಪಾವತಿ ಸೂತ್ರದ ಬಗ್ಗೆ ಚರ್ಚಿಸಲು ಜುಲೈನಲ್ಲಿ ಜಿಎಸ್‍ಟಿ ಮಂಡಳಿ ಸಭೆ ನಡೆಸಬೇಕಿತ್ತು. ಆದರೆ ಈ ಸಭೆ ಇದುವರೆಗೆ ನಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News