2,892 ಕೋಟಿ ರೂ. ಸಾಲ ಬಾಕಿ: ಅನಿಲ್ ಅಂಬಾನಿ ಕೇಂದ್ರ ಕಚೇರಿ ಸ್ವಾಧೀನಕ್ಕೆ ಮುಂದಾದ ಯೆಸ್ ಬ್ಯಾಂಕ್

Update: 2020-07-30 04:41 GMT

ಮುಂಬೈ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹ 2,892 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಯೆಸ್ ಬ್ಯಾಂಕ್ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.

ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಗೆ ನೀಡಿರುವ ಸಾಲ ವಸೂಲಾತಿ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೋಟಿಸ್‍ನಲ್ಲಿ ವಿವರಿಸಲಾಗಿದೆ. ಬ್ಯಾಕ್‍ಬೇ ಪ್ರದೇಶದಲ್ಲಿರುವ ನಗೀನ್ ಮಹಲ್‍ನ ಎರಡು ಅಂತಸ್ತನ್ನು ಬ್ಯಾಂಕ್ ವಶಪಡಿಸಿಕೊಳ್ಳಲಿದೆ. ಸುಸ್ತಿದಾರರ ಆಸ್ತಿ ಮಾರಾಟ ಮಾಡಲು ಇರುವ ಕಾನೂನು ಅವಕಾಶವನ್ನು ಬಳಸಿಕೊಂಡು ಈ ಕ್ರಮಕ್ಕೆ ಬ್ಯಾಂಕ್ ಮುಂದಾಗಿದೆ.

ರಿಲಯನ್ಸ್ ಸಮೂಹದ ಕೇಂದ್ರ ಕಚೇರಿ 21,432 ಚದರ ಮೀಟರ್ ವಿಶಾಲ ನಿವೇಶದಲ್ಲಿದ್ದು, ಇದು ಬಿಎಸ್‍ಇಎಸ್ ಸಂಸ್ಥೆಯನ್ನು ಎರಡು ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡ ಸಂಕೇತವಾಗಿದೆ. ಈ ಸಂಸ್ಥೆಯನ್ನು ಬಳಿಕ ರಿಲಯನ್ಸ್ ಎನರ್ಜಿ ಎಂದು ಮರುನಾಮಕರಣ ಮಾಡಲಾಯಿತು ಹಾಗೂ ಬಳಿಕ ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಎಂದು ಪರಿವರ್ತಿಸಲಾಯಿತು.

ರಿಲಯನ್ಸ್ ಸಮೂಹ 2018ರಲ್ಲಿ ಕಚೇರಿಯನ್ನು ಸಾಂತಾಕ್ರೂಜ್‍ಗೆ ಸ್ಥಳಾಂತರಿಸಿತ್ತು. ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಜತೆಗೆ ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಮತ್ತಿತರ ಸಂಸ್ಥೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚೆಗೆ ಕಂಪನಿ ತನ್ನ ಕಾರ್ಯಾಚರಣೆಯನ್ನು ಕುಗ್ಗಿಸಿ, ನಾರ್ತ್ ವಿಂಗ್‍ನಲ್ಲಿ ಕಚೇರಿಗಳನ್ನು ಕ್ರೋಡೀಕರಿಸಲಾಗಿತ್ತು. ಈ ಆಸ್ತಿಯನ್ನು ಜೆಲ್‍ಎಲ್‍ಗೆ ಲೀಸ್ ಆಧಾರದಲ್ಲಿ ನೀಡಲು ನಿರ್ಧರಿಸಲಾಗಿತ್ತು. ಕೋವಿಡ್-19 ಕಾರಣದಿಂದ ಬಹಳಷ್ಟು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು.

ಸುಸ್ತಿ ಸಾಲದಿಂದಾಗಿ ಕಳೆದ ಮಾರ್ಚ್ ನಲ್ಲಿ ಹಣಕಾಸು ಸಮಸ್ಯೆಗೆ ಸಿಲುಕಿದ್ದ ಯೆಸ್‍ ಬ್ಯಾಂಕ್‍ಗೆ ಅನಿಲ್ ಅಂಬಾನಿ ಸಮೂಹ 12 ಸಾವಿರ ಕೋಟಿ ರೂಪಾಯಿ ಸಾಲ ಪಾವತಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News